ADVERTISEMENT

‘ಬಿಜೆಪಿಯವರಿಂದಲೇ ಹಿಂದೂಗಳಿಗೆ ದ್ರೋಹ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 14:51 IST
Last Updated 26 ಸೆಪ್ಟೆಂಬರ್ 2024, 14:51 IST
ಅವಿನಾಶ ಜಗನ್ನಾಥ
ಅವಿನಾಶ ಜಗನ್ನಾಥ   

ಯಾದಗಿರಿ: ‘ಬಿಜೆಪಿಯವರೇ ನಿಜವಾದ ಹಿಂದುತ್ವದ ವಿರೋಧಿಗಳು’ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ ಅವಿನಾಶ ಜಗನ್ನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇತ್ತಿಚೆಗೆ ಶಹಾಪುರಕ್ಕೆ ಆಗಮಿಸಿದ್ದ ಮಾಜಿ ಸಂಸದ ಪ್ರತಾಪ ಸಿಂಹ ಕಾಂಗ್ರೆಸ್ ಪಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಮಾತನಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವಿನಾಶ್, ಬಿಜೆಪಿಯವರೇ ಹಿಂದು ವಿರೋಧಿಗಳಾಗಿದ್ದಾರೆ ಎಂದರು.

ಪ್ರತಾಪ ಸಿಂಹ ಮೊದಲು ತಮಗೆ ಬಿಜೆಪಿಯವರು ಮಾಡಿರುವ ಅನ್ಯಾಯ ಮನಗಾಣಲಿ. ತಮ್ಮ ಸ್ಥಾನವನ್ನು ಕಿತ್ತು ಮೈಸೂರು ಅರಸರಿಗೆ ಕೊಟ್ಟಿದ್ದನ್ನು ಮರೆತ್ತಿರುವಂತೆ ಕಾಣುತ್ತದೆ. ಅದನ್ನು ಬಿಟ್ಟು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ವಿರುದ್ಧ ಮನಸ್ಸಿಗೆ ತೋಚಿದಂತೆ ಮಾತನಾಡಿರುವುದು ಅವರ ಹತಾಶೆ ತೋರಿಸುತ್ತದೆ ಎಂದಿದ್ದಾರೆ.

ADVERTISEMENT

ದರ್ಶನಾಪುರ ಅವರು ಜಾತ್ಯತೀತ ವ್ಯಕ್ತಿಯಾಗಿದ್ದು, ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಅಪರೂಪದ ನಾಯಕರಾಗಿದ್ದಾರೆ. ಇದನ್ನು ನೋಡದೇ ತಮಗೆ ತಾವು ಕಪೋಲ ಕಲ್ಪಿತ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಗಣೇಶೋತ್ಸವಕ್ಕೆ ಬಂದಾಗ ಗಣೇಶನ ಬಗ್ಗೆ ಧರ್ಮ ಸಂಸ್ಕೃತಿ ಬಗ್ಗೆ ಮಾತನಾಡಬೇಕು. ಆದರೆ, ಅದನ್ನು ಬಿಟ್ಟು ದೇವರ ಆಚರಣೆ ವೇಳೆಯೂ ರಾಜಕೀಯ ಮಾತನಾಡುವುದು ಸರಿಯಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಇಂಥ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ, ಬದಲಿಗೆ ಬಿಜೆಪಿಯವರು ಹಿಂದೂಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.