ADVERTISEMENT

ಹಿರಿಯರನ್ನು ಪೂಜ್ಯ ಸ್ಥಾನದಲ್ಲಿರಿಸಿ ಗೌರವ ನೀಡಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ನ್ಯಾ.ಶಿವನಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 13:40 IST
Last Updated 1 ಅಕ್ಟೋಬರ್ 2019, 13:40 IST
ಯಾದಗಿರಿಯ ಬಾಲಭವನ ಸೊಸೈಟಿಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶಿವನಗೌಡ ಮಾತನಾಡಿದರು
ಯಾದಗಿರಿಯ ಬಾಲಭವನ ಸೊಸೈಟಿಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶಿವನಗೌಡ ಮಾತನಾಡಿದರು   

ಯಾದಗಿರಿ: ‘ಮಕ್ಕಳು ತಂದೆ-ತಾಯಿಯರನ್ನು ಪೂಜ್ಯ ಸ್ಥಾನದಲ್ಲಿರಿಸಿ ಗೌರವ ನೀಡಬೇಕು. ಅವರಿಗೆ ಅನ್ನ, ನೀರು, ವಸತಿ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಿ ಕಾಪಾಡುವ ಜವಾಬ್ದಾರಿ ಮಕ್ಕಳ ಮೇಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶಿವನಗೌಡ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಗರದ ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘60 ವರ್ಷ ದಾಟಿದವರು ಹಿರಿಯ ನಾಗರಿಕರಾಗುತ್ತಾರೆ. ಕೇಂದ್ರ ಸರ್ಕಾರ 2014ರ ಮಾರ್ಚ್ 25 ರಿಂದ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆ ಅನ್ವಯ ಮಕ್ಕಳ ರಕ್ಷಣೆಯಿಂದ ವಂಚಿತರಾದ ಹಿರಿಯರು ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಬೇಕು. ಈ ಕಾಯ್ದೆಯಡಿ ಮಕ್ಕಳಿಂದ ಗರಿಷ್ಠ ₹ 10 ಸಾವಿರದಿಂದ ಕನಿಷ್ಠ ₹ 2 ಸಾವಿರ ಮಾಸಿಕ ಪಡೆಯಬಹುದು’ ಎಂದು ಎಂದು ಸಲಹೆ ನೀಡಿದರು.

ADVERTISEMENT

‘ಹಿರಿಯರನ್ನು ಮತ್ತು ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜದ ಮಾರ್ಗದರ್ಶಕರಾಗಿರುವ ಹಿರಿಯರನ್ನು ಸಂರಕ್ಷಣೆ ಮಾಡಬೇಕು. ಅವರ ಹಕ್ಕು-ಸೌಲಭ್ಯಗಳ ಕುರಿತು ತಿಳಿವಳಿಕೆ ಮೂಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿ, ‘ಮಗುವಿನ ಪಾಲನೆ-ಪೋಷಣೆಯಲ್ಲಿ ಪೋಷಕರ ಜವಾಬ್ದಾರಿ ಹಿರಿದಾಗಿದ್ದು, ವಯಸ್ಸಾದ ಹಿರಿಯ ಜೀವಿಗಳನ್ನು ಕಡೆಗಣಿಸಬಾರದು’ ಎಂದು ಹೇಳಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ‘ನಗರ, ಹಳ್ಳಿಗಳಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳು ಹೆಚ್ಚಾಗಿವೆ. ಕಷ್ಟಪಟ್ಟು ಪೋಷಕರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಜೊತೆಗೆ ಅವರನ್ನು ಉನ್ನತ ಹುದ್ದೆಗೆ ಸೇರಿಸುತ್ತಾರೆ. ಆದರೆ, ಮಕ್ಕಳು ಪೋಷಕರನ್ನು ನಿರ್ಲಕ್ಷಿಸುತ್ತಾರೆ. ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ಯುವಕರಲ್ಲಿ ಅರಿವು ಮೂಡಿಸಿ, ಹಿರಿಯ ನಾಗರಿಕರನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿ, ‘ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಹಿರಿಯ ನಾಗರಿಕರು ನಮ್ಮ ದೇಶದ ತಳಪಾಯವಿದ್ದಂತೆ. ಅವರ ಮಾರ್ಗದರ್ಶನ ಪ್ರತಿಯೊಬ್ಬರಿಗೆ ಅವಶ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತ್ನಾಳ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್.ಮಾಲಿ ಪಾಟೀಲ ಇದ್ದರು.

ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಪ್ಪ ಪಾಟೀಲ ಸ್ವಾಗತಿಸಿದರು. ಮಹೇಶ ಪತ್ತಾರ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದಶರಥ ನಾಯಕ ವಂದಿಸಿದರು.

*
ಹಿರಿಯ ನಾಗರಿಕರಿಗೆ ಪಿಂಚಣಿ ಬಗ್ಗೆ ಅರಿವು ಇಲ್ಲ. ಅಂತಹವರಿಗೆ ಸರ್ಕಾರ ನೀಡುವ ಸವಲತ್ತುಗಳ ಕುರಿತು ತಿಳಿವಳಿಕೆ ನೀಡಬೇಕಿದೆ.
-ವೆಂಕಟರೆಡ್ಡಿಗೌಡ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.