ಲಿಂಗಸುಗೂರು ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಜಾಲಿಗಿಡಗಂಟಿಗಳಲ್ಲಿ ಮರೆಯಾಗಿರುವ ಹಾಸ್ಟೆಲ್ ಕಟ್ಟಡ
ಲಿಂಗಸುಗೂರು: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಹಾಸ್ಟೆಲ್ ಕಟ್ಟಡದ ಕಾಮಗಾರಿ 12 ವರ್ಷ ಕಳೆದರೂ ಪೂರ್ಣಗೊಂಡಿಲ್ಲ.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಪಡೆಯುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಸತಿ ಸೌಕರ್ಯಕ್ಕಾಗಿ ಕಾಲೇಜಿನ ಹಿಂಭಾಗದಲ್ಲಿ ಹಾಸ್ಟೆಲ್ ನಿರ್ಮಾಣದ ಕಾಮಗಾರಿಗೆ 2013-14ನೇ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ಕಾಮಗಾರಿ ಲಿಂಟಲ್‌ವರೆಗೆ ಮಾಡಲಾಗಿದ್ದು, ಮುಂದುವರಿಯದೇ ನನೆಗುದಿಗೆ ಬಿದ್ದಿದೆ.
ಜಾಲಿಗಿಡಗಳಲ್ಲಿ ಮರೆಯಾದ ಕಟ್ಟಡ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್) ವತಿಯಿಂದ ಹಾಸ್ಟೆಲ್ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಈ ಕಟ್ಟಡದ ಒಳ ಮತ್ತು ಹೊರಭಾಗದಲ್ಲಿ ಜಾಲಿಗಿಡಗಳು ಹೇರಳವಾಗಿ ಬೆಳೆದು ನಿಂತು ಕಟ್ಟಡವೇ ಮರೆಯಾಗಿದೆ.
ಕೆಆರ್‌ಐಡಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತು ಸರ್ಕಾರದ ಲಕ್ಷಾಂತರ ರೂಪಾಯಿ ಅನುದಾನ ಪೋಲಾದಂತಾಗಿದೆ. ಹಾಸ್ಟೆಲ್ ಕಟ್ಟಡವನ್ನು ಪೂರ್ಣಗೊಳಿಸುವ ಬಗ್ಗೆ ಚುನಾಯಿತ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪಾಲಿಟೆಕ್ನಿಕ್ ಕಾಲೇಜಿಗೆ ಮತ್ತೊಂದು ಹಾಸ್ಟೆಲ್ ಪೂರ್ಣಗೊಂಡು ಕೆಲವು ವರ್ಷ ಬಳಕೆ ಮಾಡಲಾಗಿತ್ತು. ಆ ಕಟ್ಟಡವೂ ಬಳಕೆ ಇಲ್ಲದೆ ಪಾಳು ಬಿದ್ದಿದೆ. ಒಂದು ಹಾಸ್ಟೆಲ್ ಕಾಮಗಾರಿ ಅರ್ಧಕ್ಕೆ ನಿಂತಿರುವುದು, ಮತ್ತೊಂದು ಹಾಸ್ಟೆಲ್ ಕಟ್ಟಡ ಬಳಕೆಯಿಲ್ಲದೆ ಪಾಳುಬಿದ್ದಿರುವುದು ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.
‘ಹಾಸ್ಟೆಲ್ ಕಟ್ಟಡ ಕಾಮಗಾರಿ 12 ವರ್ಷವಾದರೂ ಪೂರ್ಣಗೊಳ್ಳದಿರುವುದು ತಾಲ್ಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಗ್ಗೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪರಿಶೀಲನೆ ನಡೆಸಿ ಕಾಮಗಾರಿಗೆ ಪೂರ್ಣಗೊಳಿಸಲು ಕ್ರಮವಹಿಸಬೇಕು. ನಿರ್ಲಕ್ಷ್ಯ ಮುಂದುವರಿದರೆ ವಿದ್ಯಾರ್ಥಿಗಳೊಂದಿಗೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಹೋರಾಟಗಾರ ತಿಮ್ಮಾರೆಡ್ಡಿ ಮುನ್ನೂರು ತಿಳಿಸಿದರು.
ಕಾಮಗಾರಿ ಪೂರ್ಣಗೊಳಿಸಲು ಚಿಂತನೆ
‘ನನೆಗುದಿಗೆ ಬಿದ್ದಿರುವ ಹಾಸ್ಟೆಲ್ ಕಾಮಗಾರಿ ಪೂರ್ಣಗೊಳಿಸಲು ಬೇಕಾಗುವ ಅಂದಾಜು ವೆಚ್ಚ ಪತ್ರಿಕೆ ಸಿದ್ಧಪಡಿಸುವಂತೆ ಕೆಆರ್‌ಐಡಿಎಲ್ ಎಇಇಗೆ ಪತ್ರ ಬರೆಯಲಾಗಿದ್ದು ಅಂದಾಜು ವೆಚ್ಚ ಪತ್ರಿಕೆ ನೀಡಿದ ಕೂಡಲೇ ನಮ್ಮ ಇಲಾಖೆಗೆ ಪ್ರಸ್ತಾವ ಕಳಿಸಿ ಅನುದಾನಕ್ಕೆ ಪ್ರಯತ್ನ ಮಾಡಲಾಗುವುದು. ಪಾಳು ಬಿದ್ದಿರುವ ಮತ್ತೊಂದು ಹಾಸ್ಟೆಲ್ ಕಟ್ಟಡವನ್ನು ಬಳಕೆ ಮಾಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಹೇಳಲಾಗಿದೆ. ಅವರು ಕೂಡ ಒಪ್ಪಿದ್ದಾರೆ’ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ಸರ್ಜಾಪುರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.