ADVERTISEMENT

ಯಾದಗಿರಿ: 50ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 19:31 IST
Last Updated 19 ಆಗಸ್ಟ್ 2020, 19:31 IST
ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮದ ಮೀನುಗಾರರ ಬದುಕು ಪ್ರವಾಹದಿಂದ ಅತಂತ್ರವಾಗಿದೆ
ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮದ ಮೀನುಗಾರರ ಬದುಕು ಪ್ರವಾಹದಿಂದ ಅತಂತ್ರವಾಗಿದೆ   

ಶಹಾಪುರ/ವಡಗೇರಾ: ನಂಬಿಕೆ ಮತ್ತು ಭರವಸೆಯ ಬದುಕಿನ ಆಸರೆಯಾಗಿರುವ ಹರಿಗೋಲು ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹದ ಸೆಳೆತಕ್ಕೆ ಸಿಕ್ಕುಕೊಂಡಿದೆ. ತೆಪ್ಪ ಮತ್ತು ಮೀನಿನ ಬಲೆಯಲ್ಲಿ ಸಿಕ್ಕು ಗಾಳದಂತೆ ಒದ್ದಾಡುವಂತೆ ಆಗಿದೆ. ನದಿಯ ನೀರಿನ ಮೇಲೆ ಅವಲಂಬಿತ ಬದುಕು ಅತಂತ್ರ ಸ್ಥಿತಿಯಲ್ಲಿದೆ.

ಇದು ಕೃಷ್ಣಾ ನದಿಯ ದಂಡೆಯಲ್ಲಿ ನೆಲೆ ಕಂಡಿರುವ ಸುಮಾರು 50 ಮೀನುಗಾರರ ಕುಟುಂಬಗಳ ದುಸ್ಥಿತಿ.

ವಡಗೇರಾ ತಾಲ್ಲೂಕಿನ ಅಗ್ನಿಹಾಳ, ಗೊಂದೆನೂರ, ಅನಕಸೂಗೂರ, ಗೊಂದೆನೂರ, ಕಂದಳ್ಳಿ ಗ್ರಾಮ ಸೇರಿದಂತೆ 20ಕ್ಕೂ ಹಳ್ಳಿಗಳು ನದಿ ದಂಡೆಯ ಮೇಲೆ ಅವಲಂಬಿತವಾಗಿವೆ. ನದಿಯಲ್ಲಿ ಮೀನು ಹಿಡಿದು ಮಾರಾಟ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತವೆ. ಪ್ರವಾಹ ಎಲ್ಲವನ್ನು ಕಸಿದುಕೊಂಡಿದೆ.

ADVERTISEMENT

‘ಕಳೆದ ವರ್ಷ 25 ದಿನ ಪ್ರವಾಹದ ಸಂಕಷ್ಟದಿಂದ ಸೋತು ಹೋಗಿದ್ದೇವು. ಈಗ ಐದು ದಿನದಿಂದ ಪ್ರವಾಹದ ಹೊಡೆತದಿಂದ ತತ್ತರಿಸುವಂತೆ ಆಗಿದೆ’ ಎನ್ನುತ್ತಾರೆ ಯಲ್ಲಪ್ಪ ಸೂರ್ಯವಂಶಿ.

‘ಕೊರೊನಾ ವೈರಸ್ ಹಾವಳಿಯಿಂದ ಜನರು ಮೀನು ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದರು. ನಿಧಾನವಾಗಿ ಮೀನು ಖರೀದಿಗೆ ಮುಂದಾಗುತ್ತಿದ್ದಂತೆ ಮತ್ತೊಂದು ಸಮಸ್ಯೆ ಉಂಟಾಗಿದೆ. ಕೂಲಿ ಕೆಲಸಕ್ಕೆ ತೆರಳಿದರೆ ಅಲ್ಲಿ ಸಿಗುವ ₹100 ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಗುಡಿಸಲಿನ ಮನೆಯಲ್ಲಿ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದೇವೆ. ಜೀವನ ಮುನ್ನೆಡೆಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಮಹಿಳೆ ರೇಣುಕಾ.

ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹ ಹೆಚ್ಚಾಗುತ್ತಿದ್ದಂತೆ ತಾಲ್ಲೂಕು ಆಡಳಿತ ನದಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಮೀನುಗಾರರ ತೆಪ್ಪ, ಬಲೆ, ಬೆಂಡ್, ಹರಿಗೋಲು ಮೂಲೆ ಸೇರಿವೆ.

‘ಮೀನು ಹಿಡಿದು ಬದುಕು ಸಾಗಿಸುವ ನಾವು ಕೆಲಸವಿಲ್ಲದೆ ಊಟಕ್ಕೂ ತೊಂದರೆ ಅನುಭವಿಸುವಂತೆ ಆಗಿದೆ. ಕೊನೆ ಪಕ್ಷ ಆಹಾರ ಧಾನ್ಯ ನೀಡಿದರೆ ಹಸಿವು ಇಂಗಿಸಿಕೊಳ್ಳುತ್ತೇವೆ’ ಎಂದು ಮೀನುಗಾರರ ಕುಟುಂಬಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.

***

ಕೃಷ್ಣಾ ನದಿ ದಂಡೆಯ 23 ಹಳ್ಳಿಗಳಲ್ಲಿ ಪ್ರವಾಹ ಭೀತಿ ಮುಂದುವರೆದಿದೆ. ನದಿಗೆ ಹೆಚ್ಚಿನ ನೀರು ಹರಿಸಿದರೆ ಜಿಲ್ಲಾಧಿಕಾರಿ ಆದೇಶ ನೀಡಿದರೆ ಮುನ್ನೆಚ್ಚರಿಕೆ ಕ್ರಮವಾಗಿ ನಿರಾಶ್ರಿತ ಆಶ್ರಯ ತೆಗೆಯಲಾಗುವುದು

-ಸುರೇಶ ಅಂಕಲಗಿ, ವಡಗೇರಾ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.