ಹುಣಸಗಿ: ‘ಈ ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುವ ಸತ್ಯವನ್ನು ಯಾರು ತಿಳಿದುಕೊಳ್ಳುತ್ತಾರೋ ಅವರೇ ನಿಜವಾದ ಶ್ರೀಮಂತರು’ ಎಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ದೇವರು ಹೇಳಿದರು.
ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ವಾರ್ಷಿಕೋತ್ಸವ ಹಾಗೂ ಖಾಸ್ಗತ ವಿರಕ್ತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ‘ತಿಳಿದು ಬದುಕು’ ಪ್ರವಚನ ಮಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ತಾಯಿ ಇಲ್ಲದೇ ಹೇಗೆ ಜಗತ್ತು ಇಲ್ಲವೋ, ಅದರಂತೆ ನಮ್ಮ ಜೀವನ ಹಾಗೂ ಬದುಕಿನ ಸತ್ಯ ತಿಳಿದುಕೊಳ್ಳದೇ ಇದ್ದರೇ ಎಲ್ಲವೂ ವ್ಯರ್ಥ. ಹಣ, ಒಡವೆ, ಆಸ್ತಿ, ಸಂಬಂಧಗಳು ಎಲ್ಲವೂ ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತದೆ ಎನ್ನುವುದು ಅರಿತಾಗ ಮಾತ್ರ ನಿಶ್ಚಿಂತೆಯ ಜೀವನ ನಮ್ಮದಾಗುತ್ತದೆ’ ಎಂದು ಹೇಳಿದರು.
ದೇವರ ಭೂಪೂರದ ಗಜದಂಡ ಶಿವಾಚಾರ್ಯರು ಮಾತನಾಡಿ,‘ಚಿತೆ ನಿರ್ಜೀವ ವಸ್ತುವನ್ನು ದಹಿಸಿದರೇ ಚಿಂತೆ ನಮ್ಮನ್ನೇ ದಹಿಸುತ್ತದೆ. ಆದ್ದರಿಂದ ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಮುಕ್ತಿ ಪಥದತ್ತ ಸಾಗಬೇಕು’ ಎಂದರು.
ಜಾತ್ರೆಯ ನೇತೃತ್ವ ವಹಿಸಿದ್ದ ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗದೇವರು ಮಾತನಾಡಿ,‘ಹಣ, ಆಸ್ತಿಗಿಂತ ಮಾನವೀಯತೆ ಮುಖ್ಯ, ಯಾರು ಪರರ ಕಷ್ಟಕ್ಕೆ ಸ್ಪಂದಿಸುತ್ತಾರೋ ಅವರೇ ನಿಜವಾದ ಶ್ರೀಮಂತರು. ಜಾತ್ರೆಗೆ ಆಗಮಿಸಿದ ಭಕ್ತರಿಗೆ 50 ಸಾವಿರ ಕರಿಗಡುಬು ಪ್ರಸಾದ ವಿತರಿಸಿವ ಮೂಲಕ ಖಾಸ್ಗತೇಶ್ವರ ಭಕ್ತರ ಭಕ್ತಿ ಎಂತಹದ್ದಾಗಿದೆ ಎಂದು ಎಲ್ಲರಿಗೂ ತಿಳಿಯುವಂತಾಗಲಿದೆ’ ಎಂದರು.
ಪುರಾಣ ಮಂಗಲ ಕಾರ್ಯಕ್ರಮದ ಬಳಿಕ ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.
ಜಾತ್ರೆ ಅಂಗವಾಗಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.
ಗ್ರಾಮದ ಸಿದ್ದಲಿಂಗಯ್ಯ ಹಿರೇಮಠ, ಶ್ರೀಕಾಂತಯ್ಯ ಗಣಾಚಾರಿ, ನಿಂಗನಗೌಡ ಗುಡಗುಂಡ, ಭೀಮನಗೌಡ ದ್ಯಾಮನ್, ಬಾಪುಗೌಡ ಮಾಲಿ ಪಾಟೀಲ, ಸಿದ್ದನಗೌಡ ಪೊಲೀಸ್ ಪಾಟೀಲ , ಭೀಯರಾಯ ಹಂಗರಗಿ, ಚನ್ನಪ್ಪ ಕೊಡೇಕಲ್ಲ, ಸುಭಾಷ ಮೇಟಿ, ಬಸಣ್ಣ ಚಟ್ಟಿ, ಶಂಕ್ರಪ್ಪ ಮಾರನಾಳ, ರಾಯಣ್ಣ ಪರಮಗುಂಡ, ಶರಣಗೌಡ ಪಾಟೀಲ ಹೆಬ್ಬಾಳ, ಈರಣ್ಣ ದೇಸಾಯಿ, ಚಾಮರಾಜಗೌಡ ಪಾಟೀಲ, ಸಿದ್ದಲಿಂಗರಡ್ಡಿ ಪಾಟೀಲ ಸೇರಿ ತಾಳಿಕೋಟೆ, ಅಮಲಿಹಾಳ, ದೇವತಕಲ್ಲ, ಬೆನಹಕನಹಳ್ಳಿ, ಹೆಬ್ಬಾಳ, ಚನ್ನೂರು, ವಜ್ಜಲ, ಹುಣಸಗಿ, ಕಚಕನೂರು ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.