
ಹುಣಸಗಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೊಂಚ ನಿರಾಳವಾಗುವಂತೆ ಮಾಡಿದೆ.
‘ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ದೂರದ ನಗರಗಳತ್ತ ತೆರಳುವ ಅನಿವಾರ್ಯತೆ ಇತ್ತು. ಅಲ್ಲದೇ ಖಾಸಗಿ ಆಸ್ಪತ್ರೆಗಳಿಗೆ ವಾರದಲ್ಲಿ ಎರಡು ಮೂರು ಬಾರಿ ಹೋಗಿ ಹತ್ತಾರು ಸಾವಿರ ಖರ್ಚು ಮಾಡಬೇಕಾಗಿತ್ತು. ಹೀಗಾಗಿ ಬಡ ಜನತೆಗೆ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಾಗಿರಾಗಿತ್ತು. ಸದ್ಯ ತಾಲ್ಲೂಕು ಕೇಂದ್ರವಾಗಿರುವ ಹುಣಸಗಿ ಪಟ್ಟಣದಲ್ಲಿಯೇ ಈ ಘಟಕ ಆರಂಭವಾಗುತ್ತಿರುವುದರಿಂದಾಗಿ ಆರ್ಥಿಕ ಹೊರೆ ಜೊತೆಗೆ ಶ್ರಮ ಕೂಡಾ ತಪ್ಪಲಿದೆ’ ಎಂದು ರೋಗಿ ಅತ್ತಾರ್ ಇಬ್ರಾಹಿಂ ಮೇಸ್ತ್ರಿ ತಿಳಿಸಿದರು.
‘ಹುಣಸಗಿ ತಾಲ್ಲೂಕಿನಲ್ಲಿರುವ ಹಾಗೂ ಸುರಪುದಲ್ಲಿರುವ ಸಂಕಷ್ಟದಲ್ಲಿರುವ ರೋಗಿಗಳಿಗೆ ಈ ಸೌಲಭ್ಯ ಅನುಕೂಲವಾಲಿದೆ. ಗ್ರಾಮೀಣರ ಆರೋಗ್ಯದ ಜತೆಗೆ ಇದು ಜನಪರ ಕಾಳಜಿ ತೋರಿಸಿದಂತಾಗಿದೆ’ ಎಂದು ಹುಣಸಗಿಯ ಯುವ ಮುಖಂಡ ಆರ್.ಎಂ.ರೇವಡಿ ಹೇಳಿದರು.
ಈ ಕುರಿತು ತಾಲ್ಲೂಕು ಆರೋಗ್ಯಾಧಿಕಾರಿ ಆರ್.ವಿ.ನಾಯಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ಮಾಹಿತಿ ನೀಡಿ, ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯ ಅಡಿಯಲ್ಲಿ ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಈ ವ್ಯವಸ್ಥೆಯನ್ನು ಮಾಡಿದ್ದು, ಎರಡು ಡಯಾಲಿಸಿಸ್ ಘಟಕ ಡಿಸಿಡಿಸಿ ಸ್ವಯಂಸೇವಾ ಸಂಸ್ಥೆಯ ಅಡಿಯಲ್ಲಿಇವು ಕಾರ್ಯನಿರ್ವಹಿಸಲಿವೆ. ಪ್ರಾಯೋಗಿಕವಾಗಿ ಪರಿಕ್ಷಿಸಲಾಗಿದೆ. ಇನ್ನೂ ಮೂರು ನಾಲ್ಕು ದಿನದಲ್ಲಿ ಉದ್ಘಾಟನೆ ನಡೆಯಲಿದೆ’ ಎಂದು ಹೇಳಿದರು.
ಒಟ್ಟು ಜನಸಂಖ್ಯೆಯಲ್ಲಿ 30 ವರ್ಷ ಮೇಲ್ಪಟ್ಟ ಶೇ 100 ಜನರಲ್ಲಿ 38 ರಷ್ಟು ಜನರಿದ್ದಾರೆ. ಅದರಲ್ಲಿ ಅಧಿಕ ರಕ್ತದೊತ್ತಡ ಇರುವುವರು ಶೇ 18 ರಿಂದ 20 ಹಾಗೂ ಮದುಮೇಹ ಕಾಯಿಲೆ ಇರುವವರು ಶೇ 10 ರಿಂದ 12 ಜನ ಇದ್ದಾರೆ ಎಂದು ವರದಿಯಿಂದ ತಿಳಿದು ಬರುತ್ತದೆ. ಈ ಜನರಲ್ಲಿ ಕಿಡ್ನಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ವಿವರಿಸಿದರು. ಹೀಗಾಗಿ 30 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ವರ್ಷದಲ್ಲಿ ಒಂದು ಬಾರಿಯಾದರು ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು. ಸ್ವಯಂ ವೈದ್ಯರಾಗದೇ ತಜ್ಞ ವೈದ್ಯರ ಸಲಹೆಯೊಂದಿಗೆ ಮಾತ್ರ ಮಾತ್ರೆ ಸೇವಿಸಬೇಕು ಎಂದು ಸಲಹೆ ನೀಡಿದರು.
ಇನ್ನೂ ಅತಿ ಹೆಚ್ಚಿನ ಯುವಕರು ದುಷ್ಟಟಗಳಿಗೆ ಅಂಟಿಕೊಂಡಿದ್ದಾರೆ ಇದು ಕೂಡಾ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತದೆ ಎಂದು ಹುಣಸಗಿಯ ಹಿರಿಯ ವೈದ್ಯ ಡಾ. ಎಸ್.ಬಿ. ಪಾಟೀಲ ಹೇಳಿದರು.
ಹುಣಸಗಿ ಸಮುದಾಯ ಆರೋಗ್ಯ ಕೇಂದ್ರವು ಈ ಮೊದಲು 30 ಹಾಸಿಗೆಗಳ ಆಸ್ಪತ್ರೆಯಾಗಿತ್ತು. ಮುಂದುವರೆದು 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸಲಾಗಿದೆ. ಅದಕ್ಕೆ ತಕ್ಕಂತೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕಿದೆ. ಹಿರಿಯ ವೈದ್ಯಾಧಿಕಾರಿಗಳು ಸೇರಿದಂತೆ ಕೇವಲ ಮೂವರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮಕ್ಕಳ ಹಾಗೂ ಪ್ರಸೂತಿ ವೈದ್ಯರು ನೇಮಕಕ್ಕೆ ಒತ್ತು ನೀಡಲಿ ಎಂದು ಈ ಭಾಗದ ಜನರ ಒತ್ತಾಸೆಯಾಗಿದೆ.
ಕೆಕೆಆರ್‌ಡಿಬಿ ಅನುದಾನದಲ್ಲಿ ಹುಣಸಗಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಡಯಾಲಿಸಿಸ್ ಘಟಕವನ್ನು ಶೀಘ್ರದಲ್ಲಿಯೇ ಉದ್ಘಾಟಿಸಿ ರೋಗಿಗಳಿಗೆ ಅನುಕೂಲ ಕಲ್ಪಿಸಲಾಗುವುದು ರಾಜಾ ವೇಣುಗೋಪಾಲ ನಾಯಕ ಶಾಸಕ
ಸ್ಕಾನಿಂಗ್ ತಜ್ಞರ ಕೊರತೆ
‘ಪ್ರತಿ ತಿಂಗಳು ವಿವಿಧ 150 ರಿಂದ 200 ರೋಗಿಗಳ ಎಕ್ಸರೇ ಮಾಡಲಾಗುತ್ತದೆ. ಆದರೆ ಸ್ಕಾನಿಂಗ್ ಯಂತ್ರ ಇದ್ದರೂ ತಜ್ಞರು ಇಲ್ಲದ್ದರಿಂದಾಗಿ ಪ್ರತಿ ತಿಂಗಳೂ ನೂರಾರು ಗರ್ಭಿಣಿಯರು ಖಾಸಗಿ ಸ್ಕಾನಿಂಗ್‌ನತ್ತ ಮುಖ ಮಾಡುವಂತಾಗಿದೆ. ಈ ಸಮಸ್ಯೆಯನ್ನು ಕೂಡಾ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞರನ್ನು ಅಧಿಕಾರಿಗಳು ನೇಮಕ ಮಾಡಲಿ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.