ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಜ್ವರ, ನೆಗಡಿ, ಕೆಮ್ಮ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರೋಗಿಗಳು ದಾಖಲಾಗುತ್ತಿದ್ದಾರೆ.
ಕಳೆದ 20 ದಿನದ ಹಿಂದೆ ಜೋಗುಂಡಬಾವಿಯಲ್ಲಿ ಶಂಕರಲಿಂಗ ನಿಂಗಪ್ಪ ಪೂಜಾರಿ (6 ವರ್ಷ) ಜ್ವರದಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಗ್ರಾಮದಲ್ಲಿ ಸದ್ಯ 10 ರಿಂದ 15ಕ್ಕೂ ಹೆಚ್ಚು ಮಕ್ಕಳಿಗೆ ಜ್ವರ, ನೆಗಡಿ ಕಾಡುತ್ತಿದೆ ಎಂದು ನಿವಾಸಿ ಬಸವರಾಜ ಮಾಮನಿ ತಿಳಿಸಿದರು.
ತಾಲ್ಲೂಕಿನ ಕೋಮಲಾಪುರ ಗ್ರಾಮದ 3 ವರ್ಷ ಪುನೀತ್ ಪರಸಪ್ಪ ಹುಡೇದ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 18 ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಇನ್ನೂ ಗುಣಮುಖವಾಗಿಲ್ಲ. ಜ್ವರ ಮೆದುಳಿಗೆ ಏರಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ ಎಂದು ಮಗುವಿನ ತಂದೆ ಪರಸಪ್ಪ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳು ಸೇರಿದಂತೆ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ.
ಹುಣಸಗಿ ಆರೋಗ್ಯ ಕೇಂದ್ರದಲ್ಲಿ ನಿತ್ಯ ಸುಮಾರು 300ಕ್ಕೂ ಹೆಚ್ಚಿನ ರೋಗಿಗಳು ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಬಹುತೇಕ ರೋಗಿಳ ರಕ್ತ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಮಕ್ಕಳು ಹಾಗೂ ಮಹಿಳೆಯರಿಗೆ ವಾಂತಿ, ಜ್ವರ, ತಲೆ ನೋವು, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದೆ. ಯಾವುದೇ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡರೆ ಅದು ಡೆಂಗಿ ಎಂದು ಭಯ ಪಡದೇ ತಕ್ಷಣಕ್ಕೆ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ತಪಾಸಣೆ ಪಡೆಬೇಕು ಎಂದು ಹುಣಸಗಿಯ ಡಾ. ಎಸ್.ಬಿ. ಪಾಟೀಲ ತಿಳಿಸಿದ್ದಾರೆ.
ರಾಜನಕೋಳೂರು ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಜ್ವರ ಕಾಣಿಸಿಕೊಂಡರೇ ಡೆಂಗಿ ಎಂದು ಭಯಪಟ್ಟು ಖಾಸಗಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ ಡೆಂಗಿ ಕೇವಲ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಹಾಗೆನಾದರೂ ಕಂಡಲ್ಲಿ ಆ ಗ್ರಾಮದಲ್ಲಿಯೇ ರಕ್ತ ತಪಾಸಣೆಗೆ ಮಾದರಿ ಸಂಗ್ರಹ ಮಾಡಲಾಗುವದು ಎಂದು ರಾಜನಕೋಳೂರು ಡಾ. ಎಂ.ಬಿ.ಕೋರಿ ಹೇಳಿದರು.
ಪ್ರತಿಯೊಂದು ಮನೆಗಳಲ್ಲಿ ಕೆಲ ದಿನಗಳ ವರೆಗೆ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಹಾಗೂ ಶುಚಿತ್ವ ಮತ್ತು ಆರೋಗ್ಯ ವರ್ಧಕ ಬಿಸಿ ಆಹಾರ ಸೇವಿಸುವಂತೆ ಅವರು ಸಲಹೆ ನೀಡಿದರು.
ನಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶೇ 80ರಷ್ಟು ಜನರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಆದರೆ ಇಲಾಖೆಯಿಂದ ಜುಮಾಲಪುರ, ತೀರ್ಥ, ಮಾಳನೂರು ಮತ್ತಿತರ ಗ್ರಾಮಗಳಲ್ಲಿ ಸೊಳ್ಳೆ ಬಾಧೆ ಉಂಟಾಗದಂತೆ ಒಳಾಂಗಣ ದ್ರಾವಣ ಸಿಂಪರಣೆ ಮಾಡಲಾಗುತ್ತಿದೆ. ಹಾಗೂ ಅಲ್ಲಲ್ಲಿ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದು ಕೊಡೇಕಲ್ಲ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಸಂಜಯ ಚಂದಾ ತಿಳಿಸಿದರು.
ಜ್ವರ ನೆಗಡಿ ಕೆಮ್ಮು ಕಾಣಿಸಿಕೊಳ್ಳುವದಕ್ಕೂ ಮುನ್ನವೇ ಮಕ್ಕಳಿಗೆ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ವವಾಗಿಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಕ್ಕಳಿಗೆ ಜ್ವರ ನೆಗಡಿ ಕಾಣಿಸಿಕೊಂಡಿದೆ. ಯಾರೂ ಭಯ ಪಡದೇ ತಕ್ಷಣ ಆರೋಗ್ಯ ಕೇಂದ್ರ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕುಡಾ. ಎಸ್.ಬಿ. ಪಾಟೀಲ ವೈದ್ಯಾಧಿಕಾರಿ ಹುಣಸಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.