
ಹುಣಸಗಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಅಧ್ಯಕ್ಷ ತಿಪ್ಪಣ್ಣನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಾಳಾದ ಒಳರಸ್ತೆ, ಕುಡಿಯುವ ನೀರು, ಶೌಚಾಲಯ, ಸೇರಿದಂತೆ ಇತರ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಪಾಲ್ಗೊಂಡು ಪಟ್ಟಣದ ನಾಗರಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ಹೇಳಿದರು.
‘ಅಮೃತ್ 2 ಯೋಜನೆಯ ಅಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ವಿಳಂಬವಾಗುತ್ತಿದೆ ಹಾಗೂ ಎಲ್ಲ ಒಳರಸ್ತೆಗಳನ್ನು ಅಗೆದಿದ್ದು ಅವುಗಳ ದುರಸ್ತಿ ಕಾರ್ಯ ಕೈಗೊಂಡಿಲ್ಲ’ ಎಂದು ಸದಸ್ಯ ಆರೋಪಿಸಿದರು.
ಸಭೆಯಲ್ಲಿ ಹಾಜರಿದ್ದ ಎಂಜಿನಿಯರ್ ಶಂಕರಗೌಡ ಮಾತನಾಡಿ, ಪಟ್ಟಣದಲ್ಲಿ ಶೇ 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ 2.5 ಕಿಮಿ ವರೆಗೆ ಬಾಕಿ ಇದೆ. ಇನ್ನೂ ಎರಡು ವಾರದಲ್ಲಿ ರಸ್ತೆ ಸರಿಪಡಿಸುವ ಕೆಲಸ ಆರಂಭಿಸುವದಾಗಿ ಸಭೆಯಲ್ಲಿ ಮಾಹಿತಿ ನೀಡಿದರು.
ಎಪಿಎಂಸಿಯಲ್ಲಿರುವ ನೊಂದಣಿ ಮಾಡಿದ ಆಸ್ತಿಗಳ ಕರ ವಸೂಲಿ ಕುರಿತು ಸಭೆಯಲ್ಲಿ ಚರ್ಚೆಗೆ ಬಂದಾಗ ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ‘ನಮ್ಮ ಆಸ್ತಿಗಳು ಕೂಡಾ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ಬರುತ್ತಿದ್ದು, ನಮ್ಮ ಆಸ್ತಿಗಳಿಗೆ ನಾವೇ ಮೂಲ ಸೌಲಭ್ಯ ಕಲ್ಪಿಸುತ್ತೇವೆ. ಆದ್ದರಿಂದ ಪಟ್ಟಣ ಪಂಚಾಯಿತಿ ಯಾವುದೇ ಸೌಲಭ್ಯ ಕಲ್ಪಿಸುವದು ಬೇಡ. ಆಸ್ತಿಗಳಿಗೆ ಪಾರಂ ನಂ 3 ಮಾತ್ರ ನೀಡಬೇಕು’ ಎಂದರು.
15 ಹಣಕಾಸು ಯೋಜನೆ ಅಡಿಯಲ್ಲಿ ಬಂದಿರುವ ₹ 1.90 ಕೋಟಿ ಅನುದಾನ ಹಾಗೂ ಎಸ್‌ಎಫ್‌ಸಿ ಅಡಿಯಲ್ಲಿ ಬಂದಿರುವ ₹ 32 ಲಕ್ಷ ಅನುದಾನ ಹಾಗೂ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ಚರ್ಚಿಸಿದರು.
ಘನತ್ಯಾಜ್ಯವಿಲೇವಾರಿ ಘಟಕಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ. ಆದ್ದರಿಂದ ರಸ್ತೆ ವ್ಯವಸ್ಥೆ ಮಾಡಿಕೊಳ್ಳುವದು ಹಾಗೂ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಿವೇಶನ ನೀಡುವದು ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ, ಗ್ರಾಪಂ ಉಪಾಧ್ಯಕ್ಷ ಶಾಂತಪ್ಪ ಮಲಗಲದಿನ್ನಿ, ಸದಸ್ಯರಾದ ಶರಣು ದಂಡಿನ್, ಸಿದ್ದು ಮುದಗಲ್ಲ, ಮಲ್ಲು ಹೆಬ್ಬಾಳ, ರಾಜಶೇಖರ ದೇಸಾಯಿ, ಕಾಶಿಂಸಾಬ ಖುರೇಶಿ, ಕಾಸೀಮಸಾಬ ಚೌದ್ರಿ, ಮರಲಿಂಗಪ್ಪ ನಾಟೇಕಾರ, ನೀಖಿತಾ ಗೂಳಪ್ಪ ಅಂಗಡಿ, ಜಯಶ್ರೀ ರಮೇಶ ವಾಲಿ, ಅಬಬೇದಾ ಬೇಗಂ, ಶರಣಮ್ಮ, ಕನಕಪ್ಪ ಸಿದ್ದಾಪುರ, ಶಾಂತಪ್ಪ ಬಾಕ್ಲಿ, ಸೇರಿದಂತೆ ಇತರರು ಇದ್ದರು.
‘ಆಡಳಿತಕ್ಕೆ ತುಕ್ಕು’ ‘ಚುನಾಯಿತ ಸದಸ್ಯರಾದ ನಮ್ಮ ಕೆಲಸಗಳೇ ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಹೇಗೆ ಮುಖ ತೋರಿಸುವುದು. ನಮ್ಮ ಆಡಳಿತ ತುಕ್ಕು ಹಿಡಿದ ಕಬ್ಬಿಣದಂತಾಗಿದೆ’ ಎಂದು ಸದಸ್ಯ ಮಲ್ಲು ದ್ಯಾಪುರ ಸಭೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು. ಸಾರ್ವಜನಿಕರು ತಮ್ಮ ಆಸ್ತಿಗಳ ಪಾರಂ 3 ಪಡೆದುಕೊಳ್ಳಲು ನಿತ್ಯ ಅಲೆದಾಡುತ್ತಿದ್ದಾರೆ. ಆದರೂ ಕೆಲಸ ವೇಗ ಪಡೆಯುತ್ತಿಲ್ಲ ಎಂದು ನುಡಿದಾಗ ಎಲ್ಲ ಸದಸ್ಯರೂ ದನಿಗೂಡಿಸಿ ತ್ವರಿತ ಸೇವೆ ಒದಗಿಸಲು ಅಧಿಕಾರಿಗಳು ಮುಂದಾಗುವಂತೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.