ಹುಣಸಗಿ: ಪಂ.ಪುಟ್ಟರಾಜ ಗವಾಯಿ ಸಾವಿರಾರು ಅಂಧ, ಅನಾಥ ಮಕ್ಕಳಿಗೆ ಬೆಳಕಾಗಿ ಅವರ ಜೀವನಕ್ಕೆ ದಾರಿ ತೋರಿಸಿದ ಮಹಾ ಗುರು ಎಂದು ಚುಟುಕು ಸಾಹಿತಿ ಅಮರಯ್ಯಸ್ವಾಮಿ ಜಾಲಿಬೆಂಚಿ ಅಭಿಪ್ರಾಯಪಟ್ಟರು.
ಸವಿತಾ ಸಮಾಜ ವಿವಿಧೋದ್ದೇಶ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹುಣಸಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಂ. ಪುಟ್ಟರಾಜ ಗವಾಯಿ ಅವರ 13ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಪುಟ್ಟರಾಜರ ಗುರುಕುಲದಲ್ಲಿ ಸಾಕಷ್ಟು ಜನರು ತಮ್ಮ ಜೀವನ ಕಟ್ಟಿಕೊಳ್ಳುವ ಜೊತೆಗೆ ಸಂಗೀತದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದಕ್ಕೆ ಗುರುಗಳ ಕುರುಣೆಯೇ ಕಾರಣ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ನಾಲ್ಕು ಗೋಡೆಗಳ ಮಧ್ಯೆ ಇದ್ದ ಸಂಗೀತ ಹಾಗೂ ಕಲೆಯನ್ನು ವಿಶ್ವಮಟ್ಟದಲ್ಲಿ ಪಸರಿಸುವಂತೆ ಮಾಡಿದ ಕೀರ್ತಿ ಪಂ.ಪುಟ್ಟರಾಜ ಗವಾಯಿ ಅವರಿಗೆ ಸಲ್ಲುತ್ತದೆ’ ಎಂದರು.
‘ಸಂಗೀತ ಹಾಗೂ ಕಲಾ ಪ್ರಾಕಾರಗಳಿಗೆ ಪಂ. ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ’ ಎಂದರು.
ಶಾಲೆಯ ಪ್ರಾಚಾರ್ಯ ಅಶೋಕ ನೀಲಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುರುಪಾದಪ್ಪ ದಂಡಪ್ಪಗೌಡ್ರ ತಂಡದಿಂದ ಜನಪದ ಸಂಗೀತ, ಅಶೋಕ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಕಲಾವಿದರಾದ ಈಶ್ವರ ಬಡಿಗೇರ, ಮಲ್ಲಯ್ಯಸ್ವಾಮಿ ವಡಗೇರಿ, ತಿಮ್ಮಪ್ಪಯ್ಯ ಗವಾಯಿ, ರವಿಕುಮಾರ ಬಂಟನೂರು, ಪ್ರವೀಣ ಪತ್ತಾರ, ಸಂಗನಗೌಡ ಧನರಡ್ಡಿ, ಮಡಿವಾಳಮ್ಮ, ಮಲ್ಲಮ್ಮ, ಮಲ್ಲಿಕಾರ್ಜುನ ಹಡಪದ ಇದ್ದರು.
ಯಲ್ಲಾಲಿಂಗ ಕಟ್ಟಿಮನಿ ಪ್ರಾರ್ಥಿಸಿದರು. ರಘುವೀರ ಬಡಿಗೇರ ಸ್ವಾಗತಿಸಿದರು. ರವಿಕುಮಾರ ಪತ್ತಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.