ADVERTISEMENT

ಗುರುಮಠಕಲ್: ಸಹೋದರರ ಜತೆ ಸೇರಿ ಪತಿ ಕೊಲೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 5:22 IST
Last Updated 19 ನವೆಂಬರ್ 2021, 5:22 IST
ಯರಗೋಳ ಸಮೀಪದ ಮುದ್ನಾಳ ದೊಡ್ಡ ತಾಂಡಾದಲ್ಲಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ತಯಾರಿಕೆ ಆರೋಪದಲ್ಲಿ ಕಾಶೀನಾಥ್ ಸೊನ್ಯಾ ರಾಠೋಡ್ ಎಂಬಾತನನ್ನು ಬಂಧಿಸಿದರು
ಯರಗೋಳ ಸಮೀಪದ ಮುದ್ನಾಳ ದೊಡ್ಡ ತಾಂಡಾದಲ್ಲಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ತಯಾರಿಕೆ ಆರೋಪದಲ್ಲಿ ಕಾಶೀನಾಥ್ ಸೊನ್ಯಾ ರಾಠೋಡ್ ಎಂಬಾತನನ್ನು ಬಂಧಿಸಿದರು   

ಚಪೆಟ್ಲಾ (ಗುರುಮಠಕಲ್): ದಂಪತಿ ಕಲಹ ವಿಕೋಪಕ್ಕೆ ತಿರುಗಿ, ಸಹೋದರರೊಡನೆ ಸೇರಿ ಪತಿಯನ್ನೇ ಕೊಲೆ ಮಾಡಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಮೃತನನ್ನು ಚಪೆಟ್ಲಾ ಗ್ರಾಮದ ಭೀಮಶಪ್ಪ ಕುಪ್ಪಗಿರಿ (58) ಎಂದು ಗುರುತಿಸಲಾಗಿದ್ದು, ಆತನ ಶವ ಗಾಜರ ಕೋಟ ರಸ್ತೆಯ ಎರ‍್ರದಾರಿ (ಕೆಮ್ಮಣ್ಣಿನ ಗುಂಡಿ) ಹತ್ತಿರ ಪತ್ತೆಯಾಗಿದೆ.

ಭೀಮಶಪ್ಪ ಅವರ ಮೊದಲ ಪತ್ನಿ ಮೃತಪಟ್ಟ ಬಳಿಕ ಗಾಜರಕೋಟ ಗ್ರಾಮದ ಮಾಣಿಕೆಮ್ಮ ಅವರನ್ನು ವಿವಾಹವಾದರು. ಸದಾ ಮನೆಯಲ್ಲಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಬುಧವಾರ ರಾತ್ರಿ ಮಾಣಿಕೆಮ್ಮ ತನ್ನ ಸಹೋದರನೊಡನೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.

ADVERTISEMENT

ಪ್ರಕರಣ ಸಂಬಂಧ ಮಾಣಿಕೆಮ್ಮ, ನರಸಪ್ಪ ಭೀಮಣ್ಣ ಘಂಟಿ ಗಾಜರಕೋಟ ಮತ್ತು ಸಾಯಿಬಣ್ಣ ನಾಯ್ಕೋಡಿ ಯದ್ಲಾಪುರ ಅವರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳುಗಾರಿಕೆ ಮೇಲೆ ದಾಳಿ

ಯಾದಗಿರಿ: ವಡಗೇರಾ ತಾಲ್ಲೂಕಿನ ಗೋನಾಳ ಗ್ರಾಮದ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹದ ಅಡ್ಡೆ ಮೇಲೆ ಅಧಿಕಾರಿಗಳುದಾಳಿ ಮಾಡಿ ಮರಳು ವಶಪಡಿಸಿಕೊಂಡಿದ್ದಾರೆ.

ಮರಳು ಸಾಗಾಣಿಕೆ ಕುರಿತಂತೆ ಉಪವಿಭಾಗಾಧಿಕಾರಿ ಪ್ರಶಾಂತ್ ಹನಗಂಡಿ ಹಾಗೂ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಾ. ಪುಷ್ಪಾವತಿ ಎನ್ ನೇತೃತ್ವ ಹಾಗೂ ಮಾರ್ಗದರ್ಶನದ ಮೇರೆಗೆ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಡಗೇರಾ ಪೊಲೀಸ್ ಸಹಯೋಗದಿಂದ ದಾಳಿ ಮಾಡಿದ್ದಾರೆ. ಈ ವೇಳೆ 2,030 ಘನ ಮೀಟರ್ ಮರಳು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿದವ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮರಳಿನ ರಾಜಧನ ₹1,62,400 ಇರುತ್ತದೆ. ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ 3 ಟಿಪ್ಪರ್ ವಾಹನಗಳ ಮೇಲೆ ವಡಗೇರಾ ಪೊಲೀಸ್‌ ಠಾಣೆಯಲ್ಲಿ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪೊಲೀಸ್ ಸಹಯೋಗದಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ದಾಳಿಯಲ್ಲಿ ಭೂವಿಜ್ಞಾನಿಗಳು ಲಿಂಗರಾಜ್, ಕಿರಣ್, ಕಂದಾಯ ನಿರೀಕ್ಷಕ ಸಂಜೀವ್‌, ಮಲ್ಲಿಕಾರ್ಜುನ್ ಹಾಗೂ ಬೀರಪ್ಪ ಎಚ್.ಸಿ. ವಡಗೇರಾ ಪೊಲೀಸ್‌ ಠಾಣೆ ಇದ್ದರು ಎಂದು ಯಾದಗಿರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳ್ಳಭಟ್ಟಿ ವಶ: ಒಬ್ಬ ಸೆರೆ

ಮುದ್ನಾಳ (ಯರಗೋಳ): ಮುದ್ನಾಳ ದೊಡ್ಡ ತಾಂಡಾದಲ್ಲಿ ಗುರುವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಮನೆಯಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಆರೋಪದಲ್ಲಿ ಕಾಶೀನಾಥ್ ಸೊನ್ಯಾ ರಾಠೋಡ್ ಎಂಬಾತನನ್ನು ಬಂಧಿಸಿದ್ದಾರೆ.

ವಾಸದ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದಾಗ, ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿಟ್ಟಿದ್ದ 5 ಲೀಟರ್ ಕಳ್ಳಭಟ್ಟಿ ಹಾಗೂ 20 ಲೀಟರ್ ಬೆಲ್ಲದ ಕೊಳೆ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬಕಾರಿ ನಿರೀಕ್ಷಕ ಕೇದಾರನಾಥ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನ, ಶಹಾಪುರ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಹನಗಂಡಿ, ಶ್ರೀಧರ, ಸಾದಿಕ್ ಅಹಮ್ಮದ್, ಶರಣಬಸಪ್ಪ, ಶರೀಫ್, ಪಾಂಡುರಂಗ, ದೊಂಡಿಬಾ, ರಮೇಶ್ ಕಾರ್ಯಾಚರಣೆ ನಡೆಸಿದ್ದರು.

5 ಕ್ವಿಂಟಲ್ ಹತ್ತಿ ಕಳವು

ವಡಗೇರಾ: ತಾಲ್ಲೂಕಿನ ಅನಕಸೂಗೂರು ಗ್ರಾಮದಲ್ಲಿ ಮನೆ ಮುಂದಿನ ಕಟ್ಟೆಯ ಮೇಲೆ ಇರಿಸಿದ 5 ಕ್ವಿಂಟಲ್ ಹತ್ತಿ ಕಳವು ಮಾಡಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಗ್ರಾಮದ ನಿಂಗಪ್ಪ ಪೂಜಾರಿ ಅವರು ತಮ್ಮ ಜಮೀನಿನಿಂದ ಬಿಡಿಸಿ ತಂದಿದ್ದ ಸುಮಾರು 10 ಕ್ವಿಂಟಲ್‌ ಹತ್ತಿಯನ್ನು ಮನೆಯ ಮುಂದಿನ ಕಟ್ಟೆಯ ಮೇಲೆ ಇರಿಸಿದ್ದರು. ಬುಧವಾರ ತಡರಾತ್ರಿ ಕಳ್ಳರು ಸುಮಾರು 5 ಕ್ವಿಂಟಲ್ ಹತ್ತಿ ಕದ್ದೊಯ್ದಿದ್ದಾರೆ. ಈ ಬಗ್ಗೆ ಬೆಳೆಗಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.

‘ವರ್ಷಪೂರ್ತಿ ಕುಟುಂಬಸ್ಥರು ಜಮೀನಲ್ಲಿ ದುಡಿದು, ಸಾಲ ಮಾಡಿ ಹತ್ತಿ ಬಿತ್ತಿದ್ದೇವು. ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸಿಂಪಡಣೆ, ಕೂಲಿ ಆಳುಗಳಿಗಾಗಿ ಸಾವಿರ ರೂಪಾಯಿ ವೆಚ್ಚ ಮಾಡಿದ್ದೇವೆ. ಹೊಲದಿಂದ ತಂದು ಮಾರಾಟಕ್ಕೆಂದು ಮನೆಯ ಮುಂದೆ ಇರಿಸಿದ್ದ ಹತ್ತಿಯನ್ನು ರಾತ್ರಿ ವೇಳೆ ಕಳ್ಳರು ಕದ್ದೊಯ್ದಿದ್ದಾರೆ. ಇದೇ ಹತ್ತಿ ಮಾರಿ ಬೆಳೆ ಸಾಲ ಕಟ್ಟಬೇಕಾಗಿತ್ತು’ ಎಂದು ರೈತ ನಿಂಗಪ್ಪ ಪೂಜಾರಿ ಅಲವತ್ತುಕೊಂಡರು.

‘ಇರುವ ಸ್ವಲ್ಪ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇವೆ. ಪೊಲೀಸ್ ಠಾಣೆಗೆ ದೂರು ಕೊಟ್ಟು ಆ ಮೇಲೆ ಕೋರ್ಟ್, ಕಚೇರಿಗೆ ಅಲೆಯಬೇಕಾಗುತ್ತೆ. ನಮ್ಮಲ್ಲಿ ಅಷ್ಟೊಂದು ಹಣ ಇಲ್ಲ. ಹೀಗಾಗಿ ದೂರು ಕೊಡಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.