ADVERTISEMENT

ಹುಣಸಗಿ | ನಿಗದಿತ ಕಾಲಮಿತಿಯಲ್ಲಿ ಕೆಲಸವಾಗಲಿ: ಸಂಗಪ್ಪ ಮಂಟೆ

ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಮನದಾಳ

ಭೀಮಶೇನರಾವ ಕುಲಕರ್ಣಿ
Published 17 ಸೆಪ್ಟೆಂಬರ್ 2025, 6:11 IST
Last Updated 17 ಸೆಪ್ಟೆಂಬರ್ 2025, 6:11 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ  
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ     

ಹುಣಸಗಿ: ಭಾರತ ದೇಶ 1947ರಲ್ಲಿ ಸ್ವತಂತ್ರವಾಯಿತು. ಆದರೆ ಆಗ ನಮ್ಮ ಪ್ರದೇಶ ಮಾತ್ರ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದರಿಂದ ಸ್ವಾತಂತ್ರ್ಯ ಆನಂದಿಸುವ ದಿನ ಇರಲಿಲ್ಲ ಎಂದು ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟಗಾರ ಸಂಗಪ್ಪ ಮಂಟೆ ಮಾತು ಆರಂಭಿಸಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶ ವಿಮೋಚನಾ ಹೋರಾಟದಲ್ಲಿ ಸಾಕಷ್ಟು ಜನ ಹೋರಾಟಗಾರರು ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಅವರಲ್ಲಿ ಇಂದು ಜಿಲ್ಲೆಯ ಹೋರಾಟಗಾರರಾಗಿ ಕೊಡೇಕಲ್ಲದ ಸಂಗಪ್ಪ ಮಂಟೆ ಮಾತ್ರ ಇದ್ದಾರೆ.

ನೇಕಾರ ಕುಟುಂಬದಿಂದ ಬಂದಿರುವ ಸಂಗಪ್ಪ ಬಸಪ್ಪ ಮಂಟೆ ಅವರು 1924ರಲ್ಲಿ ಜನಿಸಿದರು. ಕೊಡೇಕಲ್ಲ ಗ್ರಾಮದಲ್ಲಿ 4ನೇ ತರಗತಿವರೆಗೆ ಮಾತ್ರ ಕಲಿತು, ತಂದೆಯಿಂದ ಬಳುವಳಿಯಾಗಿ ಬಂದಿರುವ ಕುಲಕಸುಬು ಆಯ್ದುಕೊಂಡರು. ಪತ್ನಿ ಸಂಗಮ್ಮ ಮಂಟೆ ಅವರೊಂದಿಗೆ ಅಂದಿನಿಂದ ಇಂದಿನವರೆಗೂ ನೇಕಾರಿಕೆ ಆಧಾರವಾಗಿಟ್ಟುಕೊಂಡೇ ಜೀವನ ನಡೆಸುತ್ತಿದ್ದಾರೆ. 

ADVERTISEMENT

‘ಕೆಂಭಾವಿಯ ಎಂ.ಜಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಂಟೆ ಅವರೊಂದಿಗೆ ಸಂಗಪ್ಪ ಉದ್ಯಾನ, ಬಸವರಾಜ ಯಡ್ಡಿ, ಹಾಗೂ ಬಸಲಿಂಗಪ್ಪ ಲಕ್ಕಿಮರದ ಅವರನ್ನು ಬಂಧಿಸಲಾಗಿತ್ತು’ ಎಂದು ಸ್ಮರಿಸಿಕೊಂಡರು.

‘ಕೆಲವರು ತಮ್ಮ ಗ್ರಾಮದಲ್ಲಿದ್ದುಕೊಂಡೇ ಹೋರಾಗಾರರಿಗೆ ನೆರವಾಗುತ್ತಿದ್ದರು. ಸಾವಿರಾರು ಹೋರಾಟಗಾರರ ಹೋರಾಟದ ಫಲವಾಗಿ ನಮ್ಮ ಭಾಗ ಸ್ವಾತಂತ್ರ್ಯವಾಯಿತು. ಆದರೆ ನಾವು ಕಂಡು ಸ್ವಾತಂತ್ರ್ಯದ ಕನಸು ಇಂದು ಉಳಿದುಕೊಂಡಿಲ್ಲ. ದೇಶದ ಒಳಗಡೆ ಯಾವುದೇ ಕಚೇರಿಗಳಿಗೆ ಹೋದರೂ ಕೆಲಸಗಳು ಮಾತ್ರ ಆಮೆಗತಿಲ್ಲಿಯೇ ನಡೆದಿವೆ. ಅದಕ್ಕೆ ಭ್ರಷ್ಟಾಚಾರದ ಸೋಂಕು ಮೆತ್ತಿಕೊಂಡಿದೆ’ ಎಂದು ವ್ಯವಸ್ಥೆ ಕುರಿತು ಕಟುವಾಗಿ ಟೀಕಿಸಿದರು.

‘ಹೈದರಾಬಾದ್ ಕರ್ನಾಟಕ ಪ್ರದೇಶದ ವಿಮೋಚನೆಗಾಗಿ ಹೋರಾಟ ಮಾಡಿ 3 ತಿಂಗಳು ಜೈಲುವಾಸ ಅನುಭವಿಸಿದೆವು. ಆದರೆ ಇಂದು ಯಾವುದೇ ಕಚೇರಿಯಲ್ಲಿ ನಮ್ಮಂತ ವೃದ್ಧರು, ರೈತರನ್ನು ಕಂಡರೆ ಅನಗತ್ಯ ನೆಪ ಹೇಳಿ ಇನ್ನೂ ವಿಳಂಬ ಮಾಡುತ್ತಾರೆ’ ಎಂದರು.

‘ಸರ್ಕಾರ ಪ್ರತಿಯೊಂದು ಕೆಲಸಕ್ಕೂ ಕಾಲಮಿತಿ ನಿಗದಿ ಮಾಡಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿಕೊಳ್ಳಲಿ. ಅಧಿಕಾರಿಗಳು ನಿಷ್ಠೆಯಿಂದ ಕಾಯಕ ಮಾಡುವ ಮೂಲಕ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಮುಖ್ಯ. ಇನ್ನೂ ಕೆಲವೇ ಜನ ಹೋರಾಟಗಾರರು ಬದುಕಿದ್ದಾರೆ. ಇಂದಿನ ದಿನಮಾನಕ್ಕೆ ಅಗತ್ಯವಿರುಷ್ಟು ಪಿಂಚಣಿ ಹೆಚ್ಚಿಸಬೇಕು ಎನ್ನುತ್ತಾರೆ ಸಂಗಪ್ಪ ಮಂಟೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.