ADVERTISEMENT

ಯಾದಗಿರಿ| ಮರಳು ಅಕ್ರಮ ದಂಧೆ ಅವ್ಯಾಹತ: ಮಾಜಿ ಸಚಿವ ರಾಜುಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:57 IST
Last Updated 14 ಅಕ್ಟೋಬರ್ 2025, 5:57 IST
ರಾಜುಗೌಡ
ರಾಜುಗೌಡ   

ಯಾದಗಿರಿ: ‘ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಮರಳು ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲಿ ಸುರಪುರದಲ್ಲಿ ಮಿತಿ ಮೀರಿದ್ದು, ಯಾವೊಬ್ಬ ಅಧಿಕಾರಿಯು ಅಕ್ರಮ ತಡೆಗೆ ಮುಂದಾಗುತ್ತಿಲ್ಲ. ಒಂದೇ ರಾಯಲ್ಟಿ ಪಡೆದು ಹತ್ತಾರು ಲಾರಿಗಳಲ್ಲಿ‌ ಮರಳು ಸಾಗಾಟ ಮಾಡುತ್ತಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಮಾಜಿ ಸಚಿವ ರಾಜುಗೌಡ (ನರಸಿಂಹ ನಾಯಕ) ಆರೋಪಿಸಿದರು.

‘ಸೂಗುರ, ಹೆಮ್ಮಡಗಿ, ಚೌಡೇಶ್ವರಿಹಾಳ, ಕರ್ನಾಳ, ಹೇಮನೂರ, ಶಳ್ಳಗಿ, ಮುಷ್ಟಳ್ಳಿ ಗ್ರಾಮಗಳ ಕೃಷ್ಣಾ ನದಿ ತೀರದಿಂದ ಲಕ್ಷಾಂತರ ಟನ್‌ ಮರಳು ತೆಗೆದು ಖಾಸಗಿ ಜಮೀನುಗಳಲ್ಲಿ ಸಂಗ್ರಹಿಸಿ ಇರಿಸಲಾಗಿದೆ. ಹಗಲು– ರಾತ್ರಿ ಎನ್ನದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೂ ತಂದರು ಸ್ಪಂದಿಸಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸರ್ಕಾರಕ್ಕೆ ಒಂದು ಟಿಪ್ಪರ್‌ನ ರಾಯಲ್ಟಿ ಪಾವತಿಸಿ ಹೆಚ್ಟುವರಿ ಟಿಪ್ಪರ್‌ಗಳ ಮೂಲಕ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಈ ಬಗ್ಗೆ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಗಮನಕ್ಕೆ ಬಂದಿದ್ದರೂ ತಡೆಯಲು ಆಗುತ್ತಿಲ್ಲ. ಕ್ರಮ ತೆಗೆದುಕೊಳ್ಳದೆ ಹೀಗೆಯೇ ಮುಂದುವರಿದರೆ ಹೋರಾಟ ಮಾಡಲಾಗುವುದು’ ಎಂದರು.

ADVERTISEMENT

‘ಸುರಪುರ ತಾಲ್ಲೂಕಿನಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಎಸ್.ಬಿ.ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ಒಬ್ಬರ ಮೇಲೆ ಶಾಸಕರ ಆಪ್ತರು ಹಲ್ಲೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮನವಿ ಮಾಡಿ ಕಾನ್‌ಸ್ಟೆಬಲ್‌ನನ್ನು ಬಿಡಿಸಿಕೊಂಡು ಬಂದಿದ್ದಾರೆ. ನಾರಾಯಣಪುರ ಪಿಎಸ್‌ಐ ರಾಜಶೇಖರ ಅವರು ರೌಡಿಶೀಟರ್ ನಾಗರಾಜ ಜತೆ ಕೈಜೋಡಿಸಿ, ಕಾನೂನು ಸುವ್ಯವಸ್ಥೆ ಧಕ್ಕೆ ತರುತ್ತಿದ್ದಾರೆ. ವಿನಾಕಾರಣ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಸತತ ಮಳೆ ಹಾಗೂ ಭೀಮಾ‌ ನದಿ ಪ್ರವಾಹದಿಂದಾಗಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ರಾಜ್ಯ ಸರ್ಕಾರ ಇದ್ದೂ ಸತ್ತಂತೆ ಆಗಿದೆ.  ರೈತರು ವಿಷ ಕುಡಿಯಲು ಸಹ ಹಣವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿ ಚಿಂತಾಜನಕ ಆಗಿದ್ದರೂ ಸರ್ಕಾರ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ’ ಎಂದು ಕಿಡಿಕಾರಿದರು.

‌ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ಅಮೀನರೆಡ್ಡಿ ಯಾಳಗಿ, ದೇವೀಂದ್ರನಾತ ನಾದ್, ಪರಶುರಾಮ ಕುರಕುಂದಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿನ ಅಕ್ರಮ ಪಡಿತರ ಅಕ್ಕಿಯ ಪ್ರಕರಣದ ತನಿಖೆಯನ್ನು ಕೇಂದ್ರದ ತನಿಖಾ ಸಂಸ್ಥೆಗೆ ವಹಿಸಿ ಪಾರದರ್ಶಕವಾಗಿ ತನಿಖೆ ಮಾಡಿಸಬೇಕು
ರಾಜುಗೌಡ (ನರಸಿಂಹ ನಾಯಕ) ಮಾಜಿ ಸಚಿವ

‘ದಿಕ್ಕು ತಪ್ಪಿಸುವ ಹೇಳಿಕೆ’

‘ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ದಿಕ್ಕು ತಪ್ಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.  ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಆಚರಿಸುತ್ತಿದ್ದು ಸಂಘದಿಂದ ಲಕ್ಷಾಂತರ ಸಮಾಜಮುಖಿ ಕೆಲಸಗಳಾಗಿವೆ. ಎಲ್ಲರನ್ನೂ ಸಮನಾಗಿ ಕಾಣುತ್ತಿದೆ. ಪ್ರಿಯಾಂಕ್ ಅವರ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳಿವೆ. ಅದರ ಬಗ್ಗೆ ಗಮನ ಹರಿಸುವುದು ಬಿಟ್ಟು ನಾಯಕನಾಗಲು ಹೋಗಿ ಒಂದು ಜವಾಬ್ದಾರಿಯುತ ಸಂಘದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.