ಶಹಾಪುರ: ತಾಲ್ಲೂಕಿನ ಶಿರವಾಳ ಗ್ರಾಮದ ಕೃಷಿ ಜಮೀನಿನಲ್ಲಿ ಕೃಷಿಯೇತರನ್ನಾಗಿ ಪರಿವರ್ತಿಸದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಬಳಸುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮೂರು ದಿನದ ಹಿಂದೆ (ಡಿ.21) 24 ರೈತರಿಗೆ ನೋಟಿಸು ಜಾರಿ ಮಾಡಿದ್ದಾರೆ.
ತಮ್ಮ ಜಮೀನು ಕೃಷಿ ಜಮೀನು ಆಗಿದ್ದು, ಬೇಸಾಯದ ಉದ್ದೇಶಕ್ಕಾಗಿ ಇರುತ್ತದೆ. ಆದರೆ ಪ್ರಸ್ತಾವಿತ ಜಮೀನನ್ನು ತಾವು ಕೃಷಿಯೇತರನ್ನಾಗಿ ಪರಿವರ್ತಿಸದೇ ಕಲ್ಲು ಗಣಿಗಾರಿಕೆಯನ್ನು ಯಾವುದೇ ಅನುಮತಿ ಪಡೆಯದೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95 ಉಲ್ಲಂಘನೆ ಮಾಡಿರುತ್ತೀರಿ ಎಂದು ಕಂದಾಯ ನಿರೀಕ್ಷಕರು ಜಾರಿ ಮಾಡಿದ ನೋಟಿಸಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ನೋಟಿಸು ಮುಟ್ಟಿದ 3 ದಿನಗಳ ಒಳಗೆ ಸದರಿ ಜಮೀನಿನ ಮೂಲ ಉದ್ದೇಶಕ್ಕಾಗಿ ಉಪಯೋಗಿಸುವಂತೆ ಹಾಗೂ ಅನಧಿಕೃತವಾಗಿ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸುವಂತೆ ಸೂಚಿಸಿದೆ ಎಂದು ನೋಟಿಸಿನಲ್ಲಿ ಸ್ಪಷ್ಟಪಡಿಸಿದ್ದಾರೆ.
‘ರೈತರು ತಮ್ಮ ಪಟ್ಟಾ ಜಮೀನುಗಳಲ್ಲಿ ಸುಮಾರು 200 ಅಡಿ ಆಳದಲ್ಲಿ ಮತ್ತು ಒಂದು ಎಕರೆ ವಿಶಾಲವಾಗಿ ಅಗೆದು ಕಲ್ಲುಗಳನ್ನು ಹೊರ ತೆಗೆದು ಮಾರಾಟ ಮಾಡುತ್ತಾರೆ. ಇದೇ ಕಲ್ಲುಗಳನ್ನು(ಬಾಂಡ್) ಮನೆ, ಹಾಸುಗಲ್ಲು ಹಾಕಲು ಬಳಕೆ ಮಾಡುತ್ತಾರೆ. ಹಲವಾರು ಕುಟುಂಬಗಳು ಇದೇ ಕಲ್ಲು ಗಣಿಗಾರಿಕೆಯಿಂದಲೇ ಬದುಕು ಸವೆಸುತ್ತಲಿವೆ. ಜೀವ ಸಂಕುಲಕ್ಕೆ ಅಪಾಯ ಒಡ್ಡುವ ರೀತಿಯಲ್ಲಿ ಕಲ್ಲು ಬ್ಲಾಸ್ಟಿಂಗ್ ಮಾಡುತ್ತಾರೆ. ಇದನ್ನು ತಡೆಗಟ್ಟಲು ಹೋದರೆ ನಮ್ಮ ಜೀವ ಉಳಿಸುವುದಿಲ್ಲ. ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರ ಒಬ್ಬರ ಅಣತಿಯಂತೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಗ್ರಾಮದ ಮುಖಂಡರು ಅಳುಕುತ್ತಲೇ ತಿಳಿಸಿದರು.
ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಹಲವಾರು ವರ್ಷದಿಂದ ಅಕ್ರಮವಾಗಿ ಕಲ್ಲು ಗಣಗಾರಿಕೆ ನಡೆಯುತ್ತಲಿದೆ. ಅದರಲ್ಲಿ ಶಿರವಾಳ-ಅಣಬಿ ರಸ್ತೆಗೆ ಹೊಂದಿಕೊಂಡು ಆಳವಾಗಿ ಜಮೀನು ಅಗೆದು ಹಾಕಿದ್ದಾರೆ.ವಾಹನ ಸಂಚಾರವು ಇದೆ. ಬಸ್ಸು ಚಲಿಸುವಾಗ ತುಸು ಯಾಮಾರಿದರೆ ಅದರಲ್ಲಿಯೇ ಬಿಳಬೇಕು. ಆದರೂ ಯಾರೂ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
‘ನಮ್ಮಂತೆ ತಾಲ್ಲೂಕಿನ ಅಣಬಿ, ಹೊಸೂರ, ದೋರನಹಳ್ಳಿ, ಹುರಸಗುಂಡಗಿ ಹೀಗೆ ಹಲವಾರು ಗ್ರಾಮಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ನಮ್ಮಂತೆ ಅವರಿಗೂ ನೋಟಿಸು ಜಾರಿ ಯಾಕೆ ಮಾಡಿಲ್ಲ’ ಎಂಬ ಪ್ರಶ್ನೆಯನ್ನು ಶಿರವಾಳ ಗ್ರಾಮದ ನೋಟಿಸು ಪಡೆದ ರೈತರೊಬ್ಬರು ಪ್ರಶ್ನಿಸಿದ್ದಾರೆ.
ಶಿರವಾಳ ಗ್ರಾಮದಲ್ಲಿ ಕೃಷಿ ಜಮೀನನ್ನು ಕೃಷಿಯೇತರನ್ನಾಗಿ ಪರಿವರ್ತಿಸದೆ ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಬಳಸುತ್ತಿರುವ ಬಗ್ಗೆ 24 ರೈತರಿಗೆ 3 ದಿನದ ಹಿಂದೆ ನೋಟಿಸು ಜಾರಿ ಮಾಡಲಾಗಿದೆ.ಬಸನಗೌಡ, ಆರ್‌ಐ ಶಹಾಪುರ
ಹಲವು ವರ್ಷದಿಂದ ಕಲ್ಲು ಗಣಿಗಾರಿಕೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಬಂದು ಪರಿಶೀಲಿಸುವುದು ಸಾಮಾನ್ಯ.ಹಣ ನೀಡಿದ ಮೇಲೆ ಕೆಲಸ ಆರಂಭಿಸುತ್ತೇವೆ. ಇದು ತಾಲ್ಲೂಕಿನ ಅಧಿಕಾರಿಗಳಿಗೆ ಗೊತ್ತಿದೆ.ಕೂಲಿ ಕಾರ್ಮಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.