ADVERTISEMENT

ಯಾದಗಿರಿ ಜಿಲ್ಲೆಯ ಅಂಬ್ಯುಲೆನ್ಸ್‌ಗಳಿಗೆ ಅನಾರೋಗ್ಯ

18 ಅಂಬ್ಯುಲೆನ್ಸ್‌ಗಳಲ್ಲಿ 11 ಮಾತ್ರ ಕಾರ್ಯಾಚರಣೆ, ರೋಗಿಗಳಿಗೆ ಸಮಸ್ಯೆ

ಬಿ.ಜಿ.ಪ್ರವೀಣಕುಮಾರ
Published 8 ಅಕ್ಟೋಬರ್ 2021, 16:34 IST
Last Updated 8 ಅಕ್ಟೋಬರ್ 2021, 16:34 IST
ಯಾದಗಿರಿ ಡಿಎಚ್‌ಒ ಕಚೇರಿ ಆವರಣದಲ್ಲಿರುವ ಹಾಳಾದ ಅಂಬ್ಯುಲೆನ್ಸ್, ಅಂಬಾಸಿಡರ್‌ ಕಾರು
ಯಾದಗಿರಿ ಡಿಎಚ್‌ಒ ಕಚೇರಿ ಆವರಣದಲ್ಲಿರುವ ಹಾಳಾದ ಅಂಬ್ಯುಲೆನ್ಸ್, ಅಂಬಾಸಿಡರ್‌ ಕಾರು   

ಯಾದಗಿರಿ: ಜಿಲ್ಲೆಯಲ್ಲಿ 18 ಅಂಬ್ಯುಲೆನ್ಸ್‌ಗಳಿದ್ದು, ಇವುಗಳಲ್ಲಿ 11 ಮಾತ್ರ ಕಾರ್ಯನಿರ್ವವಣೆ ಮಾಡುತ್ತಿವೆ. 5 ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಒಂದು ಅಂಬ್ಯುಲೆನ್ಸ್‌ ಅಪಘಾತವಾಗಿ ದುರಸ್ತಿಯಾಗದಂತೆ ಬಿದ್ದಿದೆ.

ತುರ್ತು ಸೇವೆಗಾಗಿ ಅಂಬ್ಯುಲೆನ್ಸ್‌ ಬೇಕಾಗುತ್ತದೆ. ಆದರೆ, ಅವುಗಳಿಗೆ ಅನಾರೋಗ್ಯದಿಂದಿದ್ದು ತುರ್ತು ದುರಸ್ತಿ ಮಾಡಬೇಕಿದೆ.

ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಗೆ ಒಳಪಡುವ 18 ಅಂಬ್ಯುಲೆನ್ಸ್‌, 108 ಜೀವಿಕೆ 12, ನಗುಮಗು 4 ಅಂಬ್ಯುಲೆನ್ಸ್‌ಗಳಿವೆ. ಸದ್ಯ 11 ಮಾತ್ರ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

ADVERTISEMENT

ಯಾದಗಿರಿ ತಾಲ್ಲೂಕಿನಲ್ಲಿ 6, ಸುರಪುರ ತಾಲ್ಲೂಕಿನಲ್ಲಿ 6 ಅಂಬ್ಯುಲೆನ್ಸ್‌ಗಳಿದ್ದರೆ 5 ಮಾತ್ರ ಕಾರ್ಯಾಚರಣೆಯಲ್ಲಿವೆ. ಇನ್ನೂ ಶಹಾಪುರ ತಾಲ್ಲೂಕಿನಲ್ಲಿ 3 ಅಂಬ್ಯುಲೆನ್ಸ್‌ಗಳಿವೆ. ಒಂದು ಅಪಘಾತದಿಂದ ಕೆಟ್ಟುನಿಂತಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ಒಂದು 108 ಅಂಬ್ಯುಲೆನ್ಸ್‌ ಪಾಳುಬಿದ್ದಿದೆ. ಒಂದು ಅಂಬಾಸಿಡರ್‌ ಕಾರ್, ಮೂರು ಕಮಾಂಡರ್‌ ಜೀಪ್‌ಗಳು ಮಳೆ, ಗಾಳಿಗೆ ತುಕ್ಕು ಹಿಡಿದು ಕೆಲಸಕ್ಕೆ ಬಾರದಂತಿವೆ.

ಗುಜರಿಗೆ ಹಾಕುವ ಪ್ರಕ್ರಿಯೆ ತಡ: ‘3 ಲಕ್ಷಕ್ಕಿಂತ ಹೆಚ್ಚು ಕಿ. ಮೀ ಓಡಾಡಿದ ವಾಹನಗಳಿದ್ದು, ಅವುಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಅವರ ದರ ನಿಗದಿ ಮಾಡಿದ ನಂತರ ಗುಜರಿಗೆ ಹಾಕಲಾಗುವುದು’ ಎನ್ನುತ್ತಾರೆ ವಾಹನ ಸರ್ವಿಸ್‌ ಎಂಜಿನಿಯರ್‌ ಜಗನ್ನಾಥ.

ಆದರೆ, ಹಲವಾರು ವರ್ಷಗಳಿಂದ ಡಿಎಚ್ಒ ಕಚೇರಿ ಆವರಣದಲ್ಲಿ ನಿಲ್ಲಿಸಿರುವ ವಾಹನಗಳು ಟೈಯರ್, ಗಾಜು, ಸೀಟು ಎಲ್ಲವೂ ಹಾಳಾಗಿವೆ. ಹಲವು ವರ್ಷಗಳ ಕಳೆದ ನಂತರ ಹಾಕಿದರೆ ಸೂಕ್ತ ದರವೂ ಸಿಗುವುದಿಲ್ಲ. ಶೀಘ್ರ ವಿಲೇವಾರಿ ಮಾಡಿ ಹೊಸ ಅಂಬ್ಯುಲೆನ್ಸ್‌ ತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಂಜಿನಿಯರ್‌ ಹುದ್ದೆಯೇ ಇಲ್ಲ:
ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದರೂ ಅಂಬ್ಯುಲೆನ್ಸ್‌ ವಾಹನ ಸರ್ವಿಸ್‌ ಎಂಜಿನಿಯರ್‌ ಹುದ್ದೆಯೇ ಇಲ್ಲ. ಹೀಗಾಗಿ ಕಲಬುರಗಿಯಿಂದ ಹೆಚ್ಚುವರಿ ಕಾರ್ಯ ಮಾಡಲಾಗುತ್ತಿದೆ. ಯಾವುದೇ ತುರ್ತು ದುರಸ್ತಿ ಇದ್ದರೆ ಕಲಬುರಗಿಯಿಂದಲೇ ಬರಬೇಕಾಗಿದೆ. ಇದರಿಂದ ಸಮಯ ಬಹಳಷ್ಟು ವ್ಯಯವಾಗುತ್ತದೆ.

ಡಿಎಚ್‌ಒ ಕಚೇರಿಯಲ್ಲಿ ಅಂಬ್ಯುಲೆನ್ಸ್‌ ಸೇರಿ ವಿವಿಧ ವಾಹನಗಳನ್ನು ವಿಲೇವಾರಿ ಮಾಡಲು ಸಂಬಂಧಿಸಿದವರಿಗೆ ತಿಳಿಸಲಾಗಿದೆ. ಶೀಘ್ರವೇ ಇದನ್ನು ಮಾಡಲಾಗುತ್ತಿದೆ.
- ಡಾ.ಇಂದುಮತಿ ಕಾಮಶೆಟ್ಟಿ, ಡಿಎಚ್‌ಒ

ಯಾದಗಿರಿ ಜಿಲ್ಲೆಯಲ್ಲಿ 18 ಅಂಬ್ಯುಲೆನ್ಸ್‌ಗಳಿವೆ. ಕೆಲವು ದುರಸ್ತಿಯಲ್ಲಿವೆ. ಇವುಗಳನ್ನು ಹರಾಜಿಗೆ ಹಾಕಲು ಆರ್‌ಟಿಒ ಕಡೆಯಿಂದ ಮಾಹಿತಿ ಕೇಳಲಾಗಿದೆ

- ಜಗನ್ನಾಥ, ವಾಹನ ಸರ್ವಿಸ್‌ ಎಂಜಿನಿಯರ್‌

ತಾಲ್ಲೂಕು ಕೇಂದ್ರದಲ್ಲಿ ಇರುವ ಒಂದೇ ಅಂಬ್ಯುಲೆನ್ಸ್. ಅದೂ ಹಳೆಯದಾಗಿದ್ದರಿಂದ ಪದೆ ಪದೇ ತಾಂತ್ರಿಕ ಸಮಸ್ಯೆಗಳಾಗುತ್ತವೆ. ತಕ್ಷಣಕ್ಕೆ ಹೆಚ್ಚುವರಿ ಚಿಕಿತ್ಸೆ ಬೇಕಾದರೆ ಅಥವಾ ಅಪಘಾತದಂತ ತುರ್ತು ಸಂದರ್ಭಗಳಲ್ಲಿ ಸಮಸ್ಯೆಯಾಗುತ್ತಿದೆ
- ಪಾಪಣ್ಣ ಮನ್ನೆ, ಗುರುಮಠಕಲ್ ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.