ADVERTISEMENT

ಯಾದಗಿರಿ: ಉದ್ಘಾಟನೆಗೆ ಗ್ರಹಣ; ವಸತಿ ಗೃಹದಲ್ಲೇ ಠಾಣೆ!

₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಕಟ್ಟಡಕ್ಕೆ ಕೂಡಿ ಬಾರದ ಮೂಹೂರ್ತ

ಬಿ.ಜಿ.ಪ್ರವೀಣಕುಮಾರ
Published 18 ಡಿಸೆಂಬರ್ 2024, 6:21 IST
Last Updated 18 ಡಿಸೆಂಬರ್ 2024, 6:21 IST
ಉದ್ಘಾಟನೆಗೆ ಕಾದಿರುವ ಯಾದಗಿರಿ ನಗರ ಪೊಲೀಸ್‌ ಠಾಣೆ
ಉದ್ಘಾಟನೆಗೆ ಕಾದಿರುವ ಯಾದಗಿರಿ ನಗರ ಪೊಲೀಸ್‌ ಠಾಣೆ   

ಯಾದಗಿರಿ: ನಗರ ಪೊಲೀಸ್ ಠಾಣೆ ನೂತನ ಕಟ್ಟಡ ನಿರ್ಮಾಣವಾಗಿ ಒಂದು ವರ್ಷ ಕಳೆದರೂ ಉದ್ಘಾಟನೆಗೆ ಮೂಹೂರ್ತ ಕೂಡಿ ಬಂದಿಲ್ಲ. ಕನಕ ವೃತ್ತ ಸಮೀಪದಲ್ಲಿರುವ ಪೊಲೀಸ್‌ ಸಿಬ್ಬಂದಿ ವಸತಿ ಗೃಹದಲ್ಲೇ ನಗರ ಪೊಲೀಸ್‌ ಠಾಣೆ ಕಳೆದ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಠಾಣೆಗೆ ತಕ್ಕಂತೆ ಕೊಠಡಿಗಳು ಇಲ್ಲ. ದೂರುದಾರರಿಗೆ ಕೂರಲು ಸರಿಯಾದ ಆಸನ ವ್ಯವಸ್ಥೆ ಇಲ್ಲ. ಸಿಬ್ಬಂದಿಯೂ ಇಕ್ಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದೇ ಡಿಸೆಂಬರ್ 4ರಂದು ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿಕೆ ನೀಡಿದ್ದರು. ಆದರೆ, ಗೃಹ ಸಚಿವರ ದಿನಾಂಕ ನಿಗದಿಯಾಗದ ಕಾರಣ ಉದ್ಘಾಟನೆ ಸಮಾರಂಭ ಮತ್ತೆ ನನೆಗುದಿಗೆ ಬಿದ್ದಿದೆ.

ADVERTISEMENT

ಮಹಾತ್ಮ ಗಾಂಧಿ ವೃತ್ತದ ಬಳಿ ಇದ್ದ ಹಳೆಯ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ಗ್ರೇಡ್‌–5ರ ಹಂತದಲ್ಲಿ ನಿರ್ಮಾಣ ಮಾಡಲಾಗಿದೆ. ಕಟ್ಟಡವನ್ನು ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿರ್ಮಿಸಿದೆ. 2023ರ ಡಿಸೆಂಬರ್‌ ತಿಂಗಳಲ್ಲೇ ಉದ್ಘಾಟನೆಯಾಗಬೇಕಾಗಿತ್ತು. ಆದರೆ, ಒಂದು ವರ್ಷದ ನಂತರವೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ನೂತನ ನಗರ ಪೊಲೀಸ್ ಠಾಣೆಯನ್ನು ಅಗತ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ ನಿರ್ಮಿಸುವುದು ಅಗತ್ಯವಾಗಿತ್ತು. ಆದ್ದರಿಂದ ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗಿದೆ.

‘ಹಲವು ತಿಂಗಳ ಹಿಂದೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಆದರೆ, ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿಲ್ಲ. ‌‌ಇದರಿಂದ ಸಿಬ್ಬಂದಿ ಪರದಾಡುತ್ತಿದ್ದಾರೆ’ ಎಂದು ಪೊಲೀಸ್‌ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಮತ್ತೊಂದು ಠಾಣೆ ಬೇಕು:

ಯಾದಗಿರಿ ನಗರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, 2011ರ ಜನಸಂಖ್ಯೆಯಂತೆ ನಗರಕ್ಕೆ ಸದ್ಯ ಒಂದು ಪೊಲೀಸ್ ಠಾಣೆ ಮಾತ್ರ ಇದೆ. ಸದ್ಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ ನಗರ ಠಾಣೆ ಹಳೆ ನಗರಕ್ಕೆ ಸೇರಿದೆ. ರೈಲು ನಿಲ್ದಾಣದ ಪ್ರದೇಶಕ್ಕೆ ಮತ್ತೊಂದು ಪೊಲೀಸ್ ಠಾಣೆಯ ಅಗತ್ಯವಿದೆ. ಇದು ನಿಲ್ದಾಣದ ಪ್ರದೇಶದ ಸಮೀಪದಲ್ಲಿ ಹಾದುಹೋಗುವ ಪ್ರಮುಖ ಎರಡು ಹೆದ್ದಾರಿಗಳನ್ನು ಒಳಗೊಂಡಿದೆ. ಹೀಗಾಗಿ ಇಲ್ಲಿಯೂ ನಗರ ಠಾಣೆ ಬೇಕು ಎನ್ನುವುದು ಜನರ ಬಹುದಿನಗಳ ಬೇಡಿಕೆಯಾಗಿದೆ.

ಪೃಥ್ವಿಕ್‌ ಶಂಕರ್
ಉಮೇಶ ಮುದ್ನಾಳ ಸಾಮಾಜಿಕ ಕಾರ್ಯಕರ್ತ
ಕಾಮಗಾರಿ ಪೂರ್ಣಗೊಂಡು ಕಾದಿರುವ ಯಾದಗಿರಿ ನಗರ ಪೊಲೀಸ್‌ ಠಾಣೆ ಡಿಸೆಂಬರ್ ತಿಂಗಳೊಳಗೆ ಉದ್ಘಾಟನೆಯಾಗಲಿದೆ
ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ನಗರ ಠಾಣೆ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಕೂಡಲೇ ಠಾಣೆಯನ್ನು ಲೋಕಾರ್ಪಣೆ ಮಾಡಬೇಕು. ಪೊಲೀಸರಿಗೂ ಸಾರ್ವಜನಿಕರಿಗೂ ಅನುಕೂಲ ಮಾಡಿಕೊಡಬೇಕು
ಉಮೇಶ ಮುದ್ನಾಳ ಸಾಮಾಜಿಕ ಕಾರ್ಯಕರ್ತ

ಹೊಸ ಕಟ್ಟಡದಲ್ಲಿ ಏನೇನಿದೆ? ಹೊಸ ಕಟ್ಟಡವನ್ನು ಅಗತ್ಯ ಮೂಲಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಅಧಿಕಾರಿಗಳ ಕೊಠಡಿಗಳು ಎರಡು ಲಾಕಪ್‌ಗಳು ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಸೇರಿದಂತೆ ಏಳು ಶೌಚಾಲಯಗಳು ವೈರ್‌ಲೆಸ್ ಕೊಠಡಿ ಪುರುಷ ಸಿಬ್ಬಂದಿ ಕೊಠಡಿ ಮತ್ತು ಮಹಿಳಾ ಸಿಬ್ಬಂದಿ ಕೊಠಡಿ ರೆಕಾರ್ಡ್ ರೂಂ ಸ್ಟೋರ್ ರೂಂ ಮತ್ತು ಕಂಪ್ಯೂಟರ್ ರೂಂಗೆ ತಲಾ ಎರಡು ಮತ್ತು ಅದರ ಹೊರತಾಗಿ ನಾಲ್ಕು ಸರ್ಕ್ಯೂಟ್ ಕ್ಲೋಸ್ಡ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಲಿ ಹೆಗ್ಗಣ ಕಾಟ

ಪ್ರಸ್ತುತ ವಸತಿ ಗೃಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಠಾಣೆಯಲ್ಲಿ ಇಲಿ ಹೆಗ್ಗಣ ಕಾಟವಿದ್ದು ಎಫ್‌ಐಆರ್‌ ಪ್ರತಿಗಳನ್ನು ತಿಂದು ಹಾಕಿವೆ. ಅರ್ಧದಷ್ಟು ಪ್ರತಿಗಳನ್ನು ಇಲಿಗಳು ತಿಂದಿವೆ. ಇಲಿ ಕಾಟ ನಿಯಂತ್ರಿಸುವ ಕೆಲಸವನ್ನೂ ಸಿಬ್ಬಂದಿ ಮಾಡಬೇಕಾಗಿದೆ. ನೂತನ ಕಟ್ಟಡ ಉದ್ಘಾಟನೆಯಾಗದ ಕಾರಣ ಅಕ್ಕಪಕ್ಕದ ನಿವಾಸಿಗಳ ಮಕ್ಕಳು ಠಾಣೆ ಸಮೀಪದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೇ ತಳ್ಳುಗಾಡಿಗಳ ಕಸ ಠಾಣೆ ಮುಂಭಾಗದಲ್ಲಿ ಬಿಸಾಡಿದ್ದಾರೆ. ಇದರಿಂದ ಠಾಣೆ ಮುಂಭಾಗದ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಎರಡು ಬಾರಿ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದರೂ ಉದ್ಘಾಟನೆಯಾಗದ ಕಾರಣ ಕೆಲ ವಸ್ತುಗಳನ್ನು ಟೆಂಟ್‌ ಶಾಮಿಯಾನದವರು ಅಲ್ಲೇ ಇಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.