ಯರಗೋಳ: ಗುರುಮಠಕಲ್ ಮತಕ್ಷೇತ್ರದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಪಂಪ್‌ಸೆಟ್‌ಗಳ ಹಾಗೂ ವಿದ್ಯುತ್ ಸಂಪರ್ಕದ ಅವಲಂಬನೆಯಿಂದ ತಮ್ಮ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಆ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಜೆಸ್ಕಾಂನಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಸಮೀಪದ ಚಾಮನಳ್ಳಿ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ₹ 21 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ 110/11ಕೆ.ವಿ ವಿದ್ಯುತ್ ಉಪ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮತಕ್ಷೇತ್ರದ ಯಡ್ಡಳ್ಳಿ, ಗೊಂದೆಡಗಿ ಗ್ರಾಮಗಳಲ್ಲಿ ಹೊಸ ವಿದ್ಯುತ್ ಉಪಕೇಂದ್ರಗಳು ಕಾರ್ಯಾರಂಭ ಮಾಡಿವೆ. ಇದರಿಂದ ಆ ಭಾಗದ ಜನರಿಗೆ ಹಾಗೂ ರೈತರಿಗೆ ಹೆಚ್ಚಿನ ಅನುಕೂಲ ಆಗಿದೆ. ಹೊಸ ವಿದ್ಯುತ್ ಉಪಕೇಂದ್ರ ಸ್ಥಾಪನೆಯಿಂದ ಚಾಮನಳ್ಳಿ, ಕಂಚಗಾರಹಳ್ಳಿ, ಮುದ್ನಾಳ, ನಗರ ಪ್ರದೇಶಗಳಿಗೆ ವಿದ್ಯುತ್ ಕಡಿತ ಆಗುವುದನ್ನು ತಪ್ಪಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಹಾಗೂ ವೈರ್‌ಗಳು ಕಡಿದು ಬೀಳುತ್ತಿವೆ. ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಜೆಸ್ಕಾಂ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಮಾರಂಭದಲ್ಲಿ ಜೆಸ್ಕಾಂ ಹಿರಿಯ ಅಧಿಕಾರಿ ಚಂದ್ರಕಾಂತ ಪಾಟೀಲ್, ರಾಜೇಶ ಹಿಪ್ಪರಗಿ, ಬಸವಂತಕುಮಾರ, ರಾಘವೇಂದ್ರ, ಮಾಣಿಕರಾವ ಕುಲಕರ್ಣಿ, ಆನಂದ, ಶಂಕರ ಗುತ್ತಿ, ಬಂದಳ್ಳಿ ಗ್ರಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ, ಸಂತೋಷ ಚವ್ಹಾಣ, ಭೋಜಣ್ಣಗೌಡ ಯಡ್ಡಳ್ಳಿ, ಬಸ್ಸುಗೌಡ ಚಾಮನಹಳ್ಳಿ, ಅಯ್ಯಣ್ಣಗೌಡ ಮಾಲಿ ಪಾಟೀಲ್, ಶರಣಗೌಡ, ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.