ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ನಿಲ್ಲದ ಸಾರಿಗೆ ಮುಷ್ಕರ, ಪ್ರಯಾಣಿಕರು ಹೈರಾಣ

ಐದನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ, 23 ಬಸ್‌ಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 15:38 IST
Last Updated 11 ಏಪ್ರಿಲ್ 2021, 15:38 IST
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ   

ಯಾದಗಿರಿ: ಸಾರಿಗೆ ನೌಕಕರು ತಮ್ಮ ಬೇಡಿಕೆಗಳನ್ನುಈಡೇರಿಸಲು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಐದನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಕಡೆ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದ್ದು, ಅತ್ತ ಪ್ರಯಾಣಿಕರು ಪರದಾಡುವುದು ತಪ್ಪಿಲ್ಲ.

ಸಮರ್ಪಕವಾಗಿ ಐದು ದಿನಗಳಿಂದ ಬಸ್‌ ಇಲ್ಲದೆ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಊರಿಗೆ ತೆರಳದೆ ವಸತಿ ನಿಲಯಗಳಲ್ಲೇ ಇರುವಂತ ಪರಿಸ್ಥಿತಿ ಏರ್ಪಟ್ಟಿದೆ. ಸರ್ಕಾರ ಸಾರಿಗೆ ಇಲಾಖೆ ನೌಕರರನ್ನು ಮಾತುಕತೆಗೆ ಆಹ್ವಾನಿಸಿಲ್ಲ. ನೌಕರರು–ಸರ್ಕಾರದ ಮಧ್ಯೆ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಮ್ಯಾಕ್ಸಿಕ್ಯಾಬ್‌, ಕ್ರೂಸರ್ ವಾಹನಗಳು ಬಸ್‌ಗಳ ಬದಲಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸಾರಿಗೆ ಇಲ್ಲದಿದ್ದರೂ ಈ ವಾಹನಗಳ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲು ಬಸ್‌ ನಿಲ್ದಾಣದ ಒಳಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಖಾಸಗಿ ವಾಹನಗಳ ಮೇಲೆ ಕುಳಿತು ಪ್ರಯಾಣ ಮಾಡುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲಾಗುವುದು’ ಎಂದರು.

ADVERTISEMENT

ಜನಸಾಮಾನ್ಯರು ಹೈರಾಣ:

ದೂರದ ಊರಿಗೆ ತೆರಳಲು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಒಂದೋ, ಎರಡು ಬಸ್‌ ಕಾರ್ಯಾಚರಣೆ ಮಾಡುತ್ತಿದ್ದು, ಅವುಗಳಿಗಾಗಿ ಬಸ್‌ ನಿಲ್ದಾಣಗಳಲ್ಲಿ ಹಲವಾರು ತಾಸು ಕಾಯ್ದುಕೊಂಡು ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಬಸ್‌ ಬಾರದೆ ಇದ್ದರೆ ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾಗಿದೆ. ಅವರು ಕೇಳುವ ದರಕ್ಕೆ ತಮ್ಮ ಊರು ಸೇರುವ ಅನಿವಾರ್ಯವಿದೆ.

‘ಸರ್ಕಾರ ಶೇ 8ರಷ್ಟು ವೇತನ ಹೆಚ್ಚು ಮಾಡುತ್ತೇವೆ ಎಂದು ಹೇಳುತ್ತಿದೆ. ಇದು ಒಟ್ಟಾರೆ ಒಂದು ಸಾವಿರ ರೂಪಾಯಿ ಹೆಚ್ಚಳವಾದಂತೆ ಆಗುತ್ತದೆ. ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿದ ವೇಳೆ ಆಗ 6ನೇ ವೇತನ ಜಾರಿಗೆ ಮಾಡುತ್ತೇವೆ ಎಂದು ಲಿಖಿತವಾಗಿ ಹೇಳಿಕೆ ಕೊಟ್ಟಿದ್ದರು. ಈಗ ಉಪ ಚುನಾವಣೆ ನೆಪ ಹೇಳಿ ಸರ್ಕಾರವೇ ಕೊಟ್ಟಿರುವ ಮಾತನ್ನು ಮರೆತಿದೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರ ಅನಿವಾರ್ಯ ಎಂದು’ ಹೆಸರು ಹೇಳಲು ಇಚ್ಛಿಸದ ಸಾರಿಗೆ ನೌಕರರ ಯೂನಿಯನ್‌ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಸಾರಿಗೆ ನೌಕರರು ಅತಿ ಕಡಿಮೆ ವೇತನ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲಸವೂ ಅಧಿಕವಾಗಿದೆ. ರಿಯಾಯಿತಿ ಪಾಸುಗಳ ಬಾಕಿ ಹಣವನ್ನು ಸರ್ಕಾರ ಇನ್ನೂ ತೀರಿಸಿಲ್ಲ. ಮಾರ್ಕೊಪೋಲ್‌ ಬಸ್‌ಗಳು ಅಧಿಕ ಡೀಸೆಲ್‌ ಬೇಡುತ್ತವೆ. ಇನ್ನಿತರ ಬಸ್‌ಗಳಿಗೆ ಕಡಿಮೆ ಇಂಧನ ಸಾಕಾಗುತ್ತದೆ. ಆದರೆ, ಸರ್ಕಾರ ಕಾರ್ಮಿಕರನ್ನು ಶೋಷಿಸುತ್ತದೆ. ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ. ಹೀಗಾಗಿಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

***

23 ಬಸ್‌ಗಳ ಕಾರ್ಯಾಚರಣೆ

ಸಾರಿಗೆ ಮುಷ್ಕರ ಇದ್ದರೂ ಜಿಲ್ಲೆಯಲ್ಲಿ ದಿನೇ ದಿನೇ ಬಸ್‌ಗಳ ಓಡಾಟ ಹೆಚ್ಚಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಟ್ರೈನಿ, ಚಾಲಕ, ನಿರ್ವಾಹಕರ ಮನವೊಲಿಸಿ ಬಸ್‌ ಕಾರ್ಯಾಚರಣೆ ಮಾಡಿಸುತ್ತಿದ್ದಾರೆ.

ಭಾನುವಾರ ಜಿಲ್ಲೆಯಲ್ಲಿ 23 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಯಾದಗಿರಿ–ಸುರಪುರ, ಸುರಪುರ–ಯಾದಗಿರಿ, ಯಾದಗಿರಿ–ವಡಗೇರಾ, ಯಾದಗಿರಿ–ಶಹಾಪುರ, ಶಹಾಪುರ–ಕಲಬುರ್ಗಿ, ಯಾದಗಿರಿ–ಹೈದರಾಬಾದ್, ಯಾದಗಿರಿ–ಗುರುಮಠಕಲ್‌ಗೆ ಬಸ್‌ಗಳ ಓಡಾಟ ನಡೆಸಿವೆ. ಹುಣಸಗಿ ತಾಲ್ಲೂಕಿಗೆ ಮಾತ್ರ ಬಸ್‌ ಓಡಾಟ ಇನ್ನೂ ಆರಂಭವಾಗಿಲ್ಲ.

***

ಖಾಸಗಿ ವಾಹನಗಳಿಗೆ ಪ್ರತಿ ಕಿ.ಮೀ ₹1.10 ಪೈಸೆಯಂತೆ ದರ ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು

ದಾಮೋದರ, ಪ್ರಾದೇಶಿಕ ಸಾರಿಗೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.