ADVERTISEMENT

ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳ

ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ನದಿಯತ್ತ ತೆರಳದಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 3:11 IST
Last Updated 23 ಜೂನ್ 2021, 3:11 IST
ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಸಂಗ್ರಹವಿರುವ ನೀರು  
ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಸಂಗ್ರಹವಿರುವ ನೀರು     

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಗ್ರಾಮದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಸಂಜೆಯಿಂದ 40 ಸಾವಿರ ಕ್ಯುಸೆಕ್ ಪ್ರಮಾಣ ನೀರು ಹರಿದು ಬರುವ ಸಾಧ್ಯತೆಗಳಿವೆ ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಕಾರಣ ಕೃಷ್ಣಾ ನದಿಗೆ ಪ್ರವಾಹ ಸ್ಥಿತಿ ಉಂಟಾಗಿದ್ದು, ಇದರಿಂದಾಗಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 1.29 ಲಕ್ಷ ಕ್ಯುಸೆಕ್ ಪ್ರಮಾಣ ನೀರಿನ ಒಳಹರಿವು ಇದೆ. ಇದರಿಂದಾಗಿ ಜಲಾಶಯ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಈ ಕಾರಣದಿಂದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೂಡಾ ಕೃಷ್ಣಾ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ನದಿಯತ್ತ ತೆರಳದಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯದಲ್ಲಿ ಸದ್ಯ 81.421 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಮಲಪ್ರಭಾ ನದಿ ವ್ಯಾಪ್ತಿ ಪ್ರದೇಶದಲ್ಲಿ ಕೂಡಾ ಮಳೆಯಾಗಿದ್ದರಿಂದ ಕಳೆದ ಮೂರು ನಾಲ್ಕು ದಿನಗಳಿಂದ ನೀರಿನ ಒಳ ಹರಿವಿದ್ದ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಆಲಮಟ್ಟಿ ಜಲಾಶಯದಿಂದ 40 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದರಿಂದಾಗಿ ಯಾವುದೇ ಸಂದರ್ಭದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.