
ಯಾದಗಿರಿ: ‘ನೆರೆಯ ರಾಯಚೂರಿನಲ್ಲಿ ಜಿಲ್ಲಾ ಉತ್ಸವಕ್ಕೆ ತಯಾರಿಗಳು ಭರದಿಂದ ನಡೆಯುತ್ತಿವೆ. ಯಾದಗಿರಿ ಜಿಲ್ಲೆಯಾಗಿ 16 ವರ್ಷಗಳಾಗುತ್ತಿದ್ದರೂ ಜಿಲ್ಲೆಯ ಉತ್ಸವದ ಬಗ್ಗೆ ಅಸಡ್ಡೆ ತೋರಿಸಲಾಗುತ್ತಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದ್ದಾರೆ.
‘ಈ ಹಿಂದೆ ಜಿಲ್ಲಾ ಉತ್ಸವಕ್ಕೆ ಹಣ ಬಿಡುಗಡೆಯಾಗಿದ್ದರೂ ಉತ್ಸವ ನಡೆಸಲು ಆಗಲಿಲ್ಲ. ಈಗ ಯಾವುದೇ ಸಮಸ್ಯೆ ಇಲ್ಲದಿದ್ದರೂ ಉತ್ಸವ ನಡೆಸಲು ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನೆರೆಯ ಜಿಲ್ಲೆಗಳ ಉತ್ಸವ ಮುಗಿದು, ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಯಚೂರು ಜಿಲ್ಲಾ ಉತ್ಸವವೂ ಈ ತಿಂಗಳ ಕೊನೆಯಲ್ಲಿ ನಡೆಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಉತ್ಸವ ನಡೆಸಲು ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಮಾರ್ಚ್ ಒಳಗಾಗಿ ಜಿಲ್ಲಾ ಉತ್ಸವ ನಡೆಸಬೇಕು. ಇಲ್ಲವಾದಲ್ಲಿ ಉತ್ಸವಕ್ಕೆ ಕರವೇ ಬಿಕ್ಷೆ ಎತ್ತಿ ಹಣವನ್ನು ಹೊಂದಿಸಿ ಕೊಡಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.