ADVERTISEMENT

ಯರಗೋಳ: 3 ದಿನ ಜಯತೀರ್ಥರ ಆರಾಧನೆ

ಮಧ್ವ ಮತದ ಚೈತನ್ಯ ಜ್ಯೋತಿ ಜಯತೀರ್ಥರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 4:25 IST
Last Updated 14 ಜುಲೈ 2025, 4:25 IST
   

ಯರಗೋಳ: ಕ್ರಿ.ಶ.13ನೇ ಶತಮಾನದಲ್ಲಿ ಮಹಾರಾಷ್ಟ್ರದ ಪಂಡರಾಪುರದ ಮಂಗಳವೇಡೆ ಗ್ರಾಮದಲ್ಲಿ ದೇಶಪಾಂಡೆ ಮನೆತನದ ಪುತ್ರನಾಗಿ ಜನಿಸಿದ ಜಯತೀರ್ಥರ ಬಾಲ್ಯದ ಹೆಸರು ದಂಡೋಪಂತ. ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಧಾರ್ಮಿಕ ಜೀವನದೆಡೆಗೆ ಮನಸ್ಸು ಮಾಡಿದರು. ಪುತ್ರನ ವರ್ತನೆ ಕಂಡ ಹೆತ್ತವರು ಚಿಂತಿಸಿದರು. ಸಂಸ್ಕಾರವಂತ ಕುಟುಂಬದ ಕನ್ಯೆಯನ್ನು ನೋಡಿ ಮದುವೆ ಮಾಡಿದರು. ಮಗ ದಂಡೋಪಂತನಿಗೆ ಇದ್ಯಾವುದರ ಬಗ್ಗೆಯೂ ವ್ಯಾಮೋಹ ಇರಲಿಲ್ಲ. ತನ್ನ ಮನದ ಇಚ್ಛೆಯಂತೆ ಧಾರ್ಮಿಕ ಸೆಳೆತಕ್ಕೆ ಒಳಗಾಗಿ, ಸಂಸಾರಿಕ ಜೀವನ ತ್ಯಜಿಸಿ, ಧಾರ್ಮಿಕ ಜೀವನದ ಕಡೆಗೆ ವಾಲಿದರು.

ಲೋಕೋದ್ದಾರಕ್ಕಾಗಿ ಬಂದ ಮಗನನ್ನು ಸಂಸಾರಕ್ಕೆ ಇಳಿಸುವುದು ಅಪರಾಧವೆಂದು ಭಾವಿಸಿದ ತಂದೆ- ತಾಯಿ ಮಗನಿಗೆ 21 ವಯಸ್ಸಿನಲ್ಲಿ ಗುರುಗಳಾದ ಅಕ್ಷೋಭ್ಯತೀರ್ಥರಿಗೆ ಒಪ್ಪಿಸಿದರು. ಮಡದಿ, ಬಂಗಾರ, ಬೆಳ್ಳಿ, ಅರಮನೆಯಲ್ಲಿನ ವೈಭವ ತೊರೆದರು. ಗುರುಗಳು ಶಿಷ್ಯನಿಗೆ ಸನ್ಯಾಸಿ ದೀಕ್ಷೆ ನೀಡಿ ಜಯತೀರ್ಥ ಎಂದು ನಾಮಕರಣ ಮಾಡಿದರು.

ಗುರುಗಳ ಮಾರ್ಗದರ್ಶನದಂತೆ ಮಹಾರಾಷ್ಟ್ರದ ಸಂಧ್ಯಾವಳಿ ಎನ್ನುವ ಗ್ರಾಮದಲ್ಲಿ ದೀರ್ಘ ತಪಸ್ಸು ಮಾಡುವಾಗ ದುರ್ಗಾದೇವಿ ಪ್ರತ್ಯಕ್ಷಳಾದಳು. ಆಗ ಜಯತೀರ್ಥರು ದೇವಿಯ ಹತ್ತಿರ ಶ್ರೀಮಧ್ವರ ಗ್ರಂಥಗಳಿಗೆ ವ್ಯಾಖ್ಯಾನ ಮಾಡಲು ಲೇಖನಿ ಮತ್ತು ಸಾಧನವನ್ನು ಯಾಚಿಸಿದಾಗ ದೇವಿಯು ಶಿಷ್ಯನ ಭಕ್ತಿಗೆ ಅನುಗ್ರಹಿಸಿದಳು.

ADVERTISEMENT

ತಮ್ಮ ಜೀವನದ ಪ್ರಧಾನ ಕಾರ್ಯಕ್ಕಾಗಿ ಯರಗೋಳ ಗ್ರಾಮಕ್ಕೆ ಆಗಮಿಸಿದರು. ಗುಹೆಯಲ್ಲಿ 13 ವರ್ಷ ಸುದೀರ್ಘ ಅಧ್ಯಯನ ಮಾಡಿದರು. ಶಿಷ್ಯರು ತಂದ ಜೋಳದ ನುಚ್ಚನ್ನು ದೇವರಿಗೆ ನೈವೇದ್ಯ ಅರ್ಪಿಸಿ ಪ್ರಸಾದವಾಗಿ ಸ್ವೀಕರಿಸಿದರು. ಮೂಲದೇವರ ಪೂಜೆ ನೆರವೇರಿಸಿ ಶ್ರೀ ಮಧ್ವರ 18 ಗ್ರಂಥಗಳಿಗೆ ವ್ಯಾಖ್ಯಾನ, 3 ಸ್ವತಂತ್ರ ಗ್ರಂಥಗಳನ್ನು ರಚಿಸಿದರು. ಮಧ್ವಮತದ ಚೈತನ್ಯ ಜ್ಯೋತಿಯಾಗಿ ಬೆಳಗಿದರು. ಶ್ರೀ ಮಧ್ವರ ಗ್ರಂಥಗಳಿಗೆ ಟೀಕೆಗಳನ್ನು ಮಾಡಿ ಟೀಕಾ ಗುರುಪಾದರಾದರು ಎಂದು ಹಿನ್ನೆಲೆ ಇದೆ. ಟೀಕಾರಾಯರು ವ್ಯಾಖ್ಯಾನಿಸಿದ ಮೇರು ಕೃತಿ, ಶ್ರೀಮನ್ ನ್ಯಾಯಸುಧಾ ಗ್ರಂಥ.

ಪ್ರತಿ ವರ್ಷ ಆಷಾಢ ಮಾಸದಲ್ಲಿ ಯರಗೋಳ ಗ್ರಾಮದಲ್ಲಿ ಪೂರ್ವಾರಾಧನೆ, ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಜಯತೀರ್ಥರ ಮೂಲ ಬೃಂದಾವನದಲ್ಲಿ ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಜರುಗುತ್ತದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಟೀಕಾರಾಯರ ದರ್ಶನ ಪಡೆದು ಪುನೀತರಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.