ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ನೋಡಿ ಜೆಡಿಎಸ್‌ ನಿರ್ಧಾರ!

ಜಿಲ್ಲಾ ಪಂಚಾಯಿತಿಯ 48 ತಿಂಗಳು ಅಧಿಕಾರ ಪೂರ್ಣ, ಉಳಿದ ಅವಧಿಗೆ ಕಸರತ್ತು

ಬಿ.ಜಿ.ಪ್ರವೀಣಕುಮಾರ
Published 20 ಜೂನ್ 2020, 16:28 IST
Last Updated 20 ಜೂನ್ 2020, 16:28 IST
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ   

ಯಾದಗಿರಿ: ಜಿಲ್ಲಾ ಪಂಚಾಯಿತಿ ಹಾಲಿ ಸದಸ್ಯರ ಅಧಿಕಾರದ ಅವಧಿ ಹತ್ತು ತಿಂಗಳು ಉಳಿದಿದ್ದು, ಈ ಅವಧಿಗೆ ಅಧ್ಯಕ್ಷರು ಯಾರಾಗಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ‘ಕಾಂಗ್ರೆಸ್‌ ಅಭ್ಯರ್ಥಿ ನೋಡಿ ನಿರ್ಧರಿಸುವ’ ತಂತ್ರಕ್ಕೆ ಜೆಡಿಎಸ್‌ ಶರಣಾಗಿದೆ.

ಹೌದು. 2016ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಬೆಂಬಲದೊಂದಿಗೆ 48 ತಿಂಗಳು ಅಧಿಕಾರ ನಡೆಸಿದೆ.

‘30:30 ತಿಂಗಳ ಅಧಿಕಾರ ಹಂಚಿಕೆಯ ಸೂತ್ರದ ಮೇಲೆ ಜೆಡಿಎಸ್‌ ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಲು ಒಪ್ಪಿಕೊಂಡಿತ್ತು. ಆದರೆ, ಕಾಂಗ್ರೆಸ್‌ ಒಬ್ಬರಿಗೆ 30 ತಿಂಗಳು, ಇನ್ನೊಬ್ಬರಿಗೆ 18 ತಿಂಗಳು ಅಧಿಕಾರ ನೀಡಿದೆ. ಈಗಾಗಲೇ ಎರಡು ಬಾರಿ ಜೆಡಿಎಸ್‌ ಸದಸ್ಯರು ಮತ ಹಾಕಿದ್ದಾರೆ. 60 ತಿಂಗಳಲ್ಲಿ ಈಗ ಉಳಿದಿರುವುದು 10 ಕೇವಲ ತಿಂಗಳು ಮಾತ್ರ. ಇದರಲ್ಲಿ ಮತ್ತೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ನಡೆಸಿದೆ. ಜೆಡಿಎಸ್‌ ಈಗಲೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾ ಎನ್ನುವ ಕುತೂಹಲವಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು.

ADVERTISEMENT

24 ಸದಸ್ಯರ ಬಲ ಹೊಂದಿದ ಜಿಲ್ಲಾ ಪಂಚಾಯಿತಿಯಲ್ಲಿಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಹೊನಗೇರಾ ಮತಕ್ಷೇತ್ರದ ಜೆಡಿಎಸ್‌ ಸದಸ್ಯೆ ಸರಸ್ವತಿ ಕಟಕಟಿ ಮೂರು ಬಾರಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಮೊದಲು ಜೆಡಿಎಸ್‌ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಒಬ್ಬರೇ ಸದಸ್ಯರಿರುವುದರಿಂದ ಮೂರು ಬಾರಿ ಸ್ಥಾಯಿ ಸಮಿತಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಉಪಾಧ್ಯಕ್ಷೆ ರಾಜೀನಾಮೆಗೆ ಮನವಿ: ‘ಜಿಲ್ಲಾ ಪಂಚಾಯಿತಿಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ಇನ್ನೂ ರಾಜೀನಾಮೆ ನೀಡಿಲ್ಲ. ಹೀಗಾಗಿ ಪಕ್ಷದ ಮುಖಂಡರು ರಾಜೀನಾಮೆ ನೀಡಲು ಮನವೊಲಿಕೆಗೆ ಮುಂದಾಗಿದ್ದಾರೆ. ರಾಜೀನಾಮೆ ನೀಡಿದರೆ ಒಟ್ಟಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಹುದು’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದರು.

ನಮಗೆಸಮಂಜಸ ಎನಿಸಿದರೆಬೆಂಬಲ!

‘ಮೊದಲಿನಂತೆ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ. ಆದರೆ, ಕಾಂಗ್ರೆಸ್‌ ಸೂಚಿಸಿದ ಅಭ್ಯರ್ಥಿ ನಮಗೆ ಸಮಂಜಸ ಎನಿಸಬೇಕು. ಇಲ್ಲದಿದ್ದರೆ ಮುಂದಿನ ನಡೆ ತೀರ್ಮಾನಿಸಲಾಗುವುದು. ಕಾಂಗ್ರೆಸ್‌ನ ಜಿ.ಪಂ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ನಮಗೆ ತಿಳಿದು ಬಂದಿಲ್ಲ’ ಎಂದು ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎರಡೂವರೆ ವರ್ಷ ಒಬ್ಬರುಉಳಿದ ಅವಧಿಗೆ ಮತ್ತೊಬ್ಬರು ಅಧ್ಯಕ್ಷರಾಗಬೇಕು ಎಂದು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ, ಈಗ ಜಿ.ಪಂ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಮತ್ತೆ ಅಧ್ಯಕ್ಷ ಗಾದಿಗೆ ಸಿದ್ಧತೆ ನಡೆಸಿದ್ದಾರೆ. ಮೂವರು ಅಧ್ಯಕ್ಷರಾದಂತೆ ಆಗುತ್ತದೆ. ಮುಂದೆ ಕಾದು ನೋಡಬೇಕಾಗಿದೆ. ನಮ್ಮ ಜಿ.ಪಂ ಸದಸ್ಯೆ ಸರಸ್ವತಿ ಅವರಿಗೆ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ತೀರ್ಮಾನವಾಗಿತ್ತು. ಮೊದಲಿಗೆ ಆರೋಗ್ಯ ಮತ್ತು ಶಿಕ್ಷಣ, ನಂತರ ಕೃಷಿ ಮತ್ತು ಕೈಗಾರಿಕೆ, ಈಗ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದು ಮುಂದುವರೆಯಬೇಕಾ? ಬೇಡವಾ ಎನ್ನುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಅದೆಲ್ಲ ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ನಿರ್ಧಾರವಾಗುತ್ತದೆ’ ಎಂದರು.

ಕಾಂಗ್ರೆಸ್ ಪಕ್ಷದವರು ನಮ್ಮನ್ನು ಸಂಪರ್ಕಿಸಿಲ್ಲ

40 ವರ್ಷಗಳ ರಾಜಕೀಯ ಜೀವನದಲ್ಲಿ ಮಾತಿಗೆ ಬದ್ಧನಾಗಿ ನಡೆದುಕೊಂಡಿದ್ದೇನೆ. ರಾಜಕೀಯವನ್ನು ದುರುಪಯೋಗ ಮಾಡಿಕೊಳ್ಳಲ್ಲ. ಆದರೂ ಕಾಂಗ್ರೆಸ್‌ ಪಕ್ಷದವರು ನಮ್ಮನ್ನು ಇನ್ನೂ ಸಂಪರ್ಕಿಸಿಲ್ಲ ಎಂದು ಶಾಸಕ ನಾಗನಗೌಡ ಕಂದಕೂರ ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್‌ ವರಿಷ್ಠರ ಮಾತಿಗೆ ಬದ್ಧರಾಗಿದ್ದೇವೆ. ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಯಾರಿಗೆ ಮತ ಹಾಕಿ ಎಂದು ಹೇಳಿದರೆ ಅವರಿಗೆ ಹಾಕುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.