ADVERTISEMENT

ಶಹಾಪುರ | ಜೆಜೆಎಂ: ₹ 140 ಕೋಟಿ ಖರ್ಚಾದರೂ ಬರಲಿಲ್ಲ ನೀರು

ದಾಖಲೆಗಳಲ್ಲಿ ಮಾತ್ರ ಜಲಜೀವನ ಮಿಷನ್‌ ಯೋಜನೆ ಯಶಸ್ವಿ

ಟಿ.ನಾಗೇಂದ್ರ
Published 23 ಫೆಬ್ರುವರಿ 2025, 5:08 IST
Last Updated 23 ಫೆಬ್ರುವರಿ 2025, 5:08 IST
21ಎಸ್ಎಚ್ಪಿ 1: ಶಹಾಪುರ ತಾಲ್ಲೂಕಿನ ಸಾದ್ಯಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ ನಿರ್ಮಿಸಿದ ಟ್ಯಾಂಕ್. ಹನಿ ನೀರು ಸರಬರಾಜು ಆಗುತ್ತಿಲ್ಲ
21ಎಸ್ಎಚ್ಪಿ 1: ಶಹಾಪುರ ತಾಲ್ಲೂಕಿನ ಸಾದ್ಯಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ ನಿರ್ಮಿಸಿದ ಟ್ಯಾಂಕ್. ಹನಿ ನೀರು ಸರಬರಾಜು ಆಗುತ್ತಿಲ್ಲ   

ಶಹಾಪುರ: ಜಲಜೀವನ ಮಿಷನ್‌ ಅಡಿಯಲ್ಲಿ ತಾಲ್ಲೂಕಿನಲ್ಲಿ ₹140 ಕೋಟಿ ಖರ್ಚು ಮಾಡಿದರೂ 197 ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಬರಲಿಲ್ಲ. ಆದರೆ ದಾಖಲೆಗಳಲ್ಲಿ ಮಾತ್ರ ಜಲಜೀವನ ಮಿಷನ್‌ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂಬುದು ಮಾಹಿತಿ ಹಕ್ಕಿನಿಂದ ಬಯಲಾಗಿದೆ.

ತಾಲ್ಲೂನಲ್ಲಿ ‘ನಾಲ್ಕು ಹಂತದಲ್ಲಿ ಜೆಜೆಎಂ ಯೋಜನೆಯ ಅಂದಾಜು ಪಟ್ಟಿಯಂತೆ ₹ 200.17 ಕೋಟಿಯಾಗಿದ್ದು, ಅದರಂತೆ ₹140.15 ಕೋಟಿ ವೆಚ್ಚದಲ್ಲಿ 197 ಹಳ್ಳಿಗಳಿಗೆ ನೀರು ಸರಬರಾಜು ಮಾಡಿದ್ದು, 66,625 ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಿದೆ.

‘ತಾಲ್ಲೂಕಿನ ಬಹುತೇಕ ಗ್ರಾ.ಪಂ ವ್ಯಾಪ್ತಿಗಳ ಗ್ರಾಮಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ. ದಾಖಲೆಗಳ ಪ್ರಕಾರ ಶೇ 80ರಷ್ಟು ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿದೆ ಎಂಬುದು ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ ತಿಳಿದು ಬಂದಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮರಾಯ ಬಾರಿಗಿಡ ಹೇಳಿದರು.

ADVERTISEMENT

‘ಸೂಕ್ತ ಜಲಮೂಲ ಹುಡುಕಾಡದೆ ಅನುಷ್ಠಾನಗೊಳಿಸಿರುವುದು. ಗ್ರಾಮದಲ್ಲಿ ನೀರು ತೃಪ್ತಿಕರವಾಗಿ ಇಲ್ಲದಿದ್ದರೂ ಸಹ ಸ್ಥಳೀಯ ರಾಜಕೀಯ ಪ್ರಭಾವಿಗಳ ಒತ್ತಡದ ಮೂಲಕ ಕಾಮಗಾರಿಯನ್ನು ಗುತ್ತಿಗೆದಾರರು ದಕ್ಕಿಸಿಕೊಂಡರು. ನಂತರ ಅಧಿಕಾರಿಗಳ ಜತೆ ಶಾಮೀಲಾಗಿ ಅರೆಬರೆ ಕಾಮಗಾರಿ ಹಾಗೂ ಮಳೆಗಾಲದಲ್ಲಿ ನಳಗಳಿಗೆ ನೀರು ಸರಬರಾಜು ಮಾಡಿದ ದಾಖಲೆಯನ್ನು ಇಟ್ಟುಕೊಂಡು ಸಾರ್ವಜನಿಕರ ಹಣವನ್ನು ಗುಳುಂ ಮಾಡಿಕೊಂಡಿದ್ದಾರೆ’ ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೆಗೊಂದಿ ಆರೋಪಿಸುತ್ತಾರೆ.

ಇದಕ್ಕೆ ತಾಲ್ಲೂಕಿನ ಹೋತಪೇಟ, ಅಣಬಿ, ಹತ್ತಿಗುಡೂರ, ಹುರಸಗುಂಡಗಿ, ಸಗರ, ವನದುರ್ಗ, ದೋರನಹಳ್ಳಿ, ವಡಗೇರಾ, ಶಿರವಾಳ ಗ್ರಾಮದಲ್ಲಿ ಜೆಜೆಎಂ ಯೋಜನೆ ಅನುಷ್ಠಾನಗೊಂಡ ಗ್ರಾಮಗಳು ತಾಜಾ ಉದಾಹರಣೆ ಆಗಿವೆ. ಅವೆಲ್ಲ ಗ್ರಾಮಗಳಿಗೆ ಖುದ್ದಾಗಿ ಹಿರಿಯ ಅಧಿಕಾರಿಗಳ ತಂಡವು ಭೇಟಿ ನೀಡಿದರೆ, ಯೋಜನೆಯ ಸತ್ಯ ಬಯಲಾಗುತ್ತದೆ ಎಂದು ಹೇಳಿದರು.

ಜೆಜೆಎಂ ಕಾಮಗಾರಿಯನ್ನು ಅಂದಾಜು ಪಟ್ಟಿಯಂತೆ ಕೆಲಸ ನಿರ್ವಹಿಸಿ, ಆಯಾ ಗ್ರಾ,ಪಂಗಳಿಗೆ ಒಪ್ಪಿಸಲಾಗಿದೆ. ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕುಸಿದು ಸಹಜವಾಗಿ ಕೊಳವೆಬಾವಿಯಲ್ಲಿ ನೀರು ಸಿಗುವುದಿಲ್ಲ. ಅಲ್ಲದೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಣೆ ಸಮಸ್ಯೆ ಹಾಗೂ ಗ್ರಾಮದ ಕೆಲ ಕಿಡಿಗೇಡಿಗಳು ಹಾಕಿದ ಪೈಪು ಕಿತ್ತು ಹಾಕಿದ್ದಾರೆ. ಇದಕ್ಕೆ ನಾವೇನು ಮಾಡಬೇಕು’ ಎಂದು  ಜೆಜೆಎಂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೊಬ್ಬರು ಪ್ರಶ್ನಿಸಿದರು.

21ಎಸ್ಎಚ್ಪಿ 1(2): ಕಣ್ಣು ಮುಚ್ಚಿದ ನಲ್ಲಿ
ಜೆಜೆಎಂ ಕಾಮಗಾರಿ ಪೂರ್ಣಗೊಂಡ ಕಡೆಗೆ ನಿರ್ವಹಣೆ ಸಮಸ್ಯೆಯಾಗಿದೆ. ನೀರಿನ ಮೂಲ ಕೊಳವೆಬಾವಿಯಲ್ಲಿ ನೀರು ಬತ್ತಿದ್ದು ಸರಬರಾಜಿಗೆ ತೊಡಕಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು
ಶರಣಬಸಪ್ಪ ದರ್ಶನಾಪುರ ಸಚಿವ

ಜೆಜೆಎಂ ನಾಲ್ಕು ಹಂತದಲ್ಲಿ ಕಾಮಗಾರಿ ₹ 200.17 ಕೋಟಿ ಅಂದಾಜು ವೆಚ್ಚ ₹ 140.15ಕೋಟಿ ಅನುದಾನ ಸದ್ಭಳಕೆ ತಾಲ್ಲೂಕಿನಲ್ಲಿ 197 ಹಳ್ಳಿಗಳಿಗೆ ನೀರು 66625 ಮನೆಗಳಿಗೆ ನಳದ ಸಂಪರ್ಕ ಮಾಹಿತಿ ಹಕ್ಕಿನಿಂದ ಬಹಿರಂಗವಾದ ದಾಖಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.