
ಶಹಾಪುರ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ನಗರದಲ್ಲಿ ನಡೆಯುವ ಸಂಗಮೇಶ್ವರ ಹಾಗೂ ಬಲಭೀಮೇಶ್ವರ ದೇವರ ಜೋಡಿ ಪಲ್ಲಕ್ಕಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಇತಿಹಾಸ ಸಾರುವ ಕೋಟೆಯ ಪ್ರವೇಶ ದ್ವಾರ ಹಾಗೂ ಬ್ಯಾನರ್ ಅಳವಡಿಕೆಯಿಂದ ನಗರವು ನವ ವಧುವಿನಂತೆ ಸಿಂಗಾರ ಕೊಂಡಿದೆ.
‘ಅಂದು ಬೆಳಿಗ್ಗೆ ಸಂಗಮೇಶ್ವರ ಹಾಗೂ ಬಲಭೀಮೇಶ್ವರ ದೇವಸ್ಥಾನದ ಪಲ್ಲಕ್ಕಿ ಮುಖಾಂತರ ಹಳಿಸಗರ ಮಡ್ನಾಳ ಮುಖಾಂತರ ಹುರಸಗುಂಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಗಂಗಾಸ್ನಾನ ಮತ್ತು ಪೂಜೆ ಕಾರ್ಯ ನಡೆಯುತ್ತದೆ. ನಂತರ ಇಳಿ ಹೊತ್ತಿಗೆ ನಗರದ ಹಳಿಸಗರ ಬಡಾವಣೆಯ ಮೂಲಕ ರಾತ್ರಿ ಇಡಿ ಜೋಡಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ’ ಎಂದು ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಮಾಹಿತಿ ನೀಡಿದರು.
ಹಬ್ಬದ ಇನ್ನೊಂದು ವಿಶೇಷವೆಂದರೆ, ರಾತ್ರಿಯಿಡಿ ಜರುಗುವ ಜೋಡಿ ಪಲ್ಲಕ್ಕಿ ಉತ್ಸವದಲ್ಲಿ ಪಂಜಿನ(ದೀವಿಟಗೆ) ಮೆರವಣಿಗೆ ಆಗುತ್ತದೆ. ದೇವಸ್ಥಾನದ ಭಕ್ತರು ಶ್ರಮವಹಿಸಿ ಹಲವು ದಿನದಿಂದ ಹಳೆಯ ಬಟ್ಟೆಯಿಂದ ಸಿದ್ಧಪಡಿಸಿದ ದೀವಟಿಗೆಗೆ ಎಣ್ಣೆ ಸುರಿದು ಅಗ್ನಿ ಹಿಡಿದುಕೊಂಡು ಜೋಡಿ ಪಲ್ಲಕ್ಕಿ ಮುಂದೆ ಸಾಗುತ್ತಿರುವ ದೃಶ್ಯವು ಹೊಸ ಲೋಕವನ್ನು ಸೃಷ್ಟಿಸಿದಂತೆ ಇರುತ್ತದೆ. ಇಂತಹ ಸೋಬಗನ್ನು ಕಣ್ಣು ತುಂಬಿಸಿಕೊಳ್ಳಲು ನೆರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಭಕ್ತರು ಆಗಮಿಸುವುದು ವಿಶೇವಾಗಿದೆ. ಮರು ದಿವಸ ತಮ್ಮ ಮೂಲ ಸ್ಥಳಕ್ಕೆ ತೆರಳಿ ಸಂಜೆ ಜಾತ್ರೆಯೂ ನಡೆಯುತ್ತದೆ.
ಅಲ್ಲದೆ ನಗರದ ಚರಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗಕ್ಕೆ ಹೊಂದಿಕೊಂಡಿರುವ ಕೋಟೆ (ದಿಗ್ಗಿ ಅಗಸಿ)ನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕೋಟೆಯನ್ನು₹ 90 ಲಕ್ಷ ವೆಚ್ಚದಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಪ್ರಾಚ್ಯವಸ್ತು ಇಲಾಖೆಯ ಆಶ್ರಯದಲ್ಲಿ ನಿರ್ಮಿಸಿ ನೋಡುಗರನ್ನು ಸೆಳೆಯುವಂತೆ ಮಾಡಿದ್ದಾರೆ. ‘ಕೋಟೆಯ ಬಳಿ ಇತಿಹಾಸ ಸಾರುವ ನಾಮಫಲಕ ಅಳವಡಿಸಬೇಕು’ ಎನ್ನುತ್ತಾರೆ ಇತಿಹಾಸ ಆಸಕ್ತ ಉಮೇಶ ಮೂಡಬೂಳ.
ಐತಿಹಾಸಿಕ ಹಿನ್ನೆಲೆ: ಔರಂಗಜೇನ ಸೇನಾಪತಿ ಸರದಾರ ದಿಲೇರಖಾನ್ ಅವರನ್ನು ಸೋಲಿಸಿದ ಸಾಕ್ಷಿ ಪ್ರಜ್ಞೆಯಾಗಿ ನಗರದ ಕೋಟೆ (ದಿಗ್ಗಿ ಅಗಸಿ) ನಿಂತಿದೆ. 1664ರಲ್ಲಿ ಪುರಂದರಗಡದದ ಯುದ್ಧದಲ್ಲಿ ಶಿವಾಜಿ ಮಹಾರಾಜನನ್ನು ಸೋಲಿಸಿದ ದಿಲೇರಖಾನ್ ಸುರಪುರ ಸಂಸ್ಥಾನದ ರಾಜಾ ಪಾಮಾನಾಯಕ (1674-1693) ಅವಧಿಯಲ್ಲಿ 1680 ಫೆಬ್ರವರಿ 20 ಹಾಗೂ 21ರಂದು ಶಹಾಪುರ ಕೋಟೆಯ ಮೇಲೆ ಆಕ್ರಮಣ ಮಾಡಿದ್ದರು. ಅಂದಿನ ಕೋಟೆಯು ಇಂದಿಗೂ ಮಜಬೂತಾಗಿ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ.
ಅಲ್ಲದೆ ಗೋಗಿಯಿಂದ ಶಹಾಪುರ ಕೋಟೆಯ ಮೇಲೆ ಆಕ್ರಮಣ ಮಾಡಿದಾಗ ಬಲಭೀಮ ದೇವಸ್ಥಾನ ಯುದ್ದದಲ್ಲಿ ಭಗ್ನಗೊಂಡು ಮೂರ್ತಿಯು ನೆಲದಲ್ಲಿ ಹೂತು ಹೋಯಿತು. ಮುಂದೆ ರೈತನ ನೇಗಿಲಿಗೆ ಸಿಕ್ಕು ಹೊರ ಬಂದಿತು ಎಂದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಮುಂದೆ ಬಲಭೀಮರಾಯನ ದೇವಸ್ಥಾನ ನಿರ್ಮಿಸಿದರು. ಅದೇ ಇಂದಿನ ಭೀಮರಾಯನಗುಡಿಯಾಗಿದೆ.
ರಾತ್ರಿಯಿಡಿ ಪಂಜಿನ ಮೆರವಣಿಗೆ ನಗರವು ನವ ವಧುವಿನಂತೆ ಸಿಂಗಾರ ಇತಿಹಾಸ ಸಾರುವ ಕೋಟೆ ಕಮಾನ ನಿರ್ಮಾಣ
ದಿಗ್ಗಿ ಸಂಗಮೇಶ್ವರ ಮತ್ತು ಭೀಮರಾಯನಗುಡಿ ಬಲಭೀಮೇಶ್ವರರ ಜಾತ್ರಾ ಮಹೋತ್ಸವವು ಗುರುವಾರ ರಂದು ಜೋಡಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.-ಸಿದ್ದಾರೂಢ ಬನ್ನಿಕೊಪ್ಪ ತಹಶೀಲ್ದಾರ್ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.