ADVERTISEMENT

ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಕೈಜೋಡಿಸಿ

ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಶಾಖೆ ಕಾರ್ಯಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:23 IST
Last Updated 23 ಫೆಬ್ರುವರಿ 2020, 10:23 IST
ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ತಾಲ್ಲೂಕು ಶಾಖೆ ಕಾರ್ಯಾಲಯವನ್ನು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಉದ್ಘಾಟಿಸಿದರು
ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ತಾಲ್ಲೂಕು ಶಾಖೆ ಕಾರ್ಯಾಲಯವನ್ನು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಉದ್ಘಾಟಿಸಿದರು   

ಯಾದಗಿರಿ: ವರ್ಷಾಂತ್ಯಕ್ಕೆ ನಗರದಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣ ಕಾರ್ಯಕ್ರಮ ನೆರವೇರಲು ಎಲ್ಲರೂ ಕೈಜೋಡಿಸುವಂತೆ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಟರೆಡ್ಡಿಗೌಡ ಮುದ್ನಾಳ ಕರೆ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಶಾಖೆ ಕಾರ್ಯಾಲಯ ಉದ್ಘಾಟಿಸಿ, ಅವರು ಮಾತನಾಡಿದರು.

ಜಿಲ್ಲಾ ಕೇಂದ್ರದಲ್ಲಿ ಇದುವರೆಗೆ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆ ಆಗಿಲ್ಲದಿರುವುದು ಬೇಸರದ ಸಂಗತಿ. ಸಮಾಜದ ಒಗ್ಗಟ್ಟನ್ನು ಇದು ಪ್ರಶ್ನಿಸುತ್ತಿದ್ದು, ಎಲ್ಲರೂ ಕೈಜೋಡಿಸುವ ಮೂಲಕ ವರ್ಷದ ಕೊನೆಯ ವೇಳೆಗೆ ಬಸವೇಶ್ವರ ಪ್ರತಿಮೆ ಅನಾವರಣ ಆಗಬೇಕು ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಶ್ರೀಕ್ಷೇತ್ರ ಹೆಡಗಿಮದ್ರಾಮಠದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯಾದಗಿರಿಯಲ್ಲಿ ವೀರಶೈವ ಸಮಾಜದ ಒಂದು ವಿದ್ಯಾರ್ಥಿ ನಿಲಯ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಇದುವರೆಗೂ ಈ ಬಗ್ಗೆ ಯೋಚಿಸದೇ ಇದ್ದರೂ ಪರವಾಗಿಲ್ಲ. ಇನ್ನು ಮುಂದೆ ಸಮಾಜದ ದೊಡ್ಡ ಸ್ಥಾನದಲ್ಲಿರುವವರು ಈ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

ವೀರಶೈವ ಸಮಾಜದ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕರ್ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲ ಮಹಾಸಭಾ ಘಟಕದ ತಾಲ್ಲೂಕು ಕಚೇರಿ ಉದ್ಘಾಟನೆಗೊಳ್ಳುತ್ತಿರುವುದು ಯಾದಗಿರಿಯಲ್ಲಿ ಎಂಬುದೇ ಹೊಸ ದಾಖಲೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಶರಣಪ್ಪಗೌಡ ಮಲ್ಹಾರ, ಚಂದ್ರರೆಡ್ಡಿ, ಮಹಾದೇವಪ್ಪ ಅಬ್ಬೆತುಮಕೂರು, ಬಸವರಾಜ ಸ್ವಾಮಿ ಬದ್ದೇಪಲ್ಲಿ, ವಿಶ್ವನಾಥ ಪರಡಿ, ವೀರಭದ್ರಯ್ಯ ಸ್ವಾಮಿ ಜಾಕಮಠ, ವಿಶ್ವನಾಥ ಕಸಬಾಗ, ಬಸನಗೌಡ ಕನ್ಯಾಕೊಳೂರು, ನಾಗಪ್ಪ ಸಜ್ಜನ, ರಮೇಶ ದೊಡ್ಡಮನಿ
ಇದ್ದರು.

ಅನನ್ಯ ಮೋದಿ, ಮಾಣಿಕೇಶ್ವರಿ ಲದ್ದಿ ಪ್ರಾರ್ಥನೆ ಗೀತೆ ಹಾಡಿದರು. ಮಹಾಸಭಾ ಯುವ ಘಟಕದ ತಾಲ್ಲೂಕು ಅಧ್ಯಕ್ಷ ನೀಲಕಂಠ ಶೀಲವಂತ ಸ್ವಾಗತಿಸಿದರು. ಸಾಹಿತಿ ವೆಂಕಟೇಶ ಕಲ್ಲಕಂಭ ಪತ್ತಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.