ಸುರಪುರ: ‘ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸಿತ್ತು. ಅದೇ ರೀತಿ ಇಂದಿಗೂ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಶ್ರಮ ಅನುಕರಣೀಯ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಪತ್ರಿಕೆಗಳು ಸಮಾಜದಲ್ಲಿರುವ ಸಮಸ್ಯೆಗಳು, ನೊಂದವರ ಪರ ಸುದ್ದಿ ಬಿತ್ತರಿಸುವ ಮೂಲಕ ಸಂಬಂಧಿಸಿದವರ ಕಣ್ತೆರೆಸುತ್ತವೆ. ಸರ್ಕಾರ ಮತ್ತು ಜನರ ಮಧ್ಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಪತ್ರಿಕೆಗಳು ಆಡಳಿತಕ್ಕೆ ಮಾರ್ಗದರ್ಶನ ನೀಡುತ್ತವೆ’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿದರು.
ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಮಾಜಿ ಅಧ್ಯಕ್ಷ ರಾಜಾ ವಾಸುದೇವನಾಯಕ, ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ತಹಶೀಲ್ದಾರ್ ಎಚ್.ಎ.ಸರಕವಾಸ್, ಪಿಐ ಉಮೇಶ್.ಎಂ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಕರಭಟ್ ಜೋಷಿ, ರಾಘವೇಂದ್ರ ಕಾಮನಟಗಿ, ಗುಂಡಭಟ್ಟ ಜೋಶಿ, ವಿಶಾಲ ದೋರನಹಳ್ಳಿ, ಕ್ಷ್ಮೀರಲಿಂಗಯ್ಯ ಹಿರೇಮಠ ವೇದಿಕೆಯಲ್ಲಿದ್ದರು.
ಹಿರಿಯ ಪತ್ರಕರ್ತ ಗಿರೀಶ್ ಶಾಬಾದಿಗೆ ಜೀವಮಾನ ವಿಶೇಷ ಪ್ರಶಸಿ ನೀಡಿ ಗೌರವಿಸಲಾಯಿತು. ಕಲೀಂ ಫರೀದಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ನೀಡಲಾಯಿತು.
ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲು ಬಾದ್ಯಾಪುರ ಸ್ವಾಗತಿಸಿದರು. ಪುರುಷೋತ್ತಮ ನಾಯಕ ನಿರೂಪಿಸಿದರು. ನಾಗರಾಜ ನ್ಯಾಮತಿ ವಂದಿಸಿದರು.
ಪತ್ರಕರ್ತರಿಗೆ ನಿವೇಶನ ಒದಗಿಸಿ:
ಸುರಪುರ ಪತ್ರಿಕಾ ಭವನದ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಪತ್ರಕರ್ತರಿಗೆ ನಗರಸಭೆ ವತಿಯಿಂದ ನಿವೇಶನ ಒದಗಿಸಬೇಕು. ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಶಾಸಕ ರಾಜಾ ವೇಣುಗೋಪಾಲ ನಾಯಕರಿ ಅವರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.