
ಕಕ್ಕೇರಾ: ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷ ಸಣ್ಣ ಅಯ್ಯಾಳಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ತುರ್ತು ಸಭೆ ಜರುಗಿತು. ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್ ಹಲವು ವಿಷಯ ಸರ್ವಸದಸ್ಯರ ಗಮನಕ್ಕೆ ತಂದಾಗ ₹ 3 ಕೋಟಿ ಅನುದಾನದ ನೂತನ ಬಸ್ ನಿಲ್ದಾಣಕ್ಕೆ ಸ್ಥಳ ಗುರುತಿಸಿ ಭೂಮಿ ಒದಗಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4ರ ಯೋಜನೆಯಡಿ ಮಂಜೂರಾದ ಬಸ್ ನಿಲ್ದಾಣಕ್ಕೆ ಭೂಮಿ ಒದಗಿಸುವ ವಿಚಾರಕ್ಕೆ ಕೆನರಾ ಬ್ಯಾಂಕ್ ಪಕ್ಕದಲ್ಲಿನ ಸಾರ್ವಜನಿಕ ಸ್ಮಶಾನದಲ್ಲಿ ₹ 3ಕೋಟಿ ವೆಚ್ಚದಲ್ಲಿ ಸುಂದರವಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿ ಅಸ್ತು ಎಂದರು.
‘ಬಸ್ ನಿಲ್ದಾಣ ನಿರ್ಮಾಣಣಕ್ಕೂ ಮುನ್ನ ಸಾರ್ವಜನಿಕ ಸ್ಮಶಾನಕ್ಕೆ ಊರ ಹೊರಗಿನ ಸರಕಾರದ ಭೂಮಿ ನೀಡಿ ಅದನ್ನು ಅಭಿವೃದ್ಧಿ ಪಡಿಸಬೇಕು’ ಎಂದೂ ಸಹ ಸೂಚಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ 2.0 ಯೋಜನೆಯಡಿಯಲ್ಲಿ ಸಲ್ಲಿಸಿರುವ ಅರ್ಜಿಗಳ ಕುರಿತಾಗಿ ಚರ್ಚಿಸಿ ಅರ್ಹ ಫಲಾನುಭವಿಗಳಿಂದ ಮತ್ತೇ ಅರ್ಜಿ ಆಹ್ವಾನಿಸಲು ಸದಸ್ಯರು ಒಪ್ಪಿಗೆ ಮತ್ತು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಅಂಗಡಿಗಳಿಗೆ ಪ್ರತಿ ಚದರ ಅಡಿಗೆ ₹ 10 ಪ್ರಕಾರ ದರ ನಿಗದಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾದ ಜಮೀನು ಅಭಿವೃದ್ಧಿ ಪಡಿಸಲು ಸರ್ವ ಸದಸ್ಯರು ಒಪ್ಪಿಗೆ ನೀಡಿದರು.
‘ಪುರಸಭೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕ ಮೌನೇಶ ನಾಯಕ್ ಅವರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರುಗಳ ಮಾತಿಗೆ ಕಿಮ್ಮತ್ತು ಕೊಡದೇ ಹಾಗೂ ಮೊಬೈಲ್ ಕರೆಗಳಿಗೆ ಸ್ಪಂದಿಸುತ್ತಿಲ್ಲ. ಅಲ್ಲದೆ ಆಡಳಿತ ಮಂಡಳಿ ವಿರುದ್ಧ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದು ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು’ ಎಂದು ಮುಖ್ಯಾಧಿಕಾರಿಗೆ ಆಗ್ರಹಿಸಿದರು.
ಉಪಾಧ್ಯಕ್ಷ ದೇವಿಂದ್ರ ದೇಸಾಯಿ, ಸದಸ್ಯರಾದ ವೆಂಕಟೇಶನಾಯಕ ಜಾಗೀರದಾರ, ಲಕ್ಷ್ಮಣ ಲಿಂಗದಳ್ಳಿ, ಚಿದಾನಂದ ಕಮತಗಿ, ಪರಮಣ್ಣ ಕಮತಗಿ, ಸೋಮನಾಥ ಸೊಲಾಪೂರ, ಸಿದ್ದಣ್ಣ ದೇಸಾಯಿ, ನಿಂಗಪ್ಪ ನಾಯ್ಕ್, ಪರಶುರಾಮ ಗೋವಿಂದರ್, ಮಲ್ಲು ದಂಡಿನ್, ನಂದಣ್ಣ ವಾರಿ, ಜೆಟ್ಟೆಪ್ಪ ದಳಾ, ಅಡಿವಯ್ಯ ಸ್ವಾಮಿ, ಗುಡದಪ್ಪ ಬಿಳೇಭಾವಿ, ಬಸಪ್ಪ ಕಟ್ಟಿಮನಿ, ರಂಜಾನಸಾಬ್, ಮುತ್ತು ಕುರಿ, ಸೋಮು ಜುಮ್ಮಾ, ಬಾಲು ರಾಠೋಡ್, ನಾಗಪ್ಪ ಮಲಮುತ್ತಿ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.