ADVERTISEMENT

ಕಕ್ಕೇರಾ: ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಬಂದ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 7:27 IST
Last Updated 1 ಮಾರ್ಚ್ 2026, 7:27 IST
ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಸಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಕ್ಕೇರಾ ಪಟ್ಟಣ ಬಂದ್ ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ ಅವರಿಗೆ ಮನವಿ ಪತ್ರ ನೀಡಲಾಯಿತು
ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಸಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಕ್ಕೇರಾ ಪಟ್ಟಣ ಬಂದ್ ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ ಅವರಿಗೆ ಮನವಿ ಪತ್ರ ನೀಡಲಾಯಿತು   

ಕಕ್ಕೇರಾ: ‘ಪಟ್ಟಣವು ತಾಲ್ಲೂಕು ಕೇಂದ್ರವಾಗಲು ಮತ್ತು ವಿಧಾನಸಭಾ ಮತಕ್ಷೇತ್ರವಾಗಲು ಕಕ್ಕೇರಾ ಪಟ್ಟಣವು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಕೂಡ ಜನಪ್ರತಿನಿಧಿಗಳ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಪಟ್ಟಣದ ಸಾಮೂಹಿಕ ಸಂಘಟನೆಗಳು, ಸಾರ್ವಜನಿಕರು, ವಿವಿಧ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಪ್ರಮುಖರು ಮಾತನಾಡಿ, ‘ರಾಜ್ಯದಲ್ಲಿಯೇ ಕಕ್ಕೇರಾ ಪಟ್ಟಣ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಫಲವತ್ತಾದ ಭೂಮಿಯೊಂದಿಗೆ ನೀರಾವರಿ ಹೊಂದಿದೆ. ಪಟ್ಟಣವು ವಾಡಿ– ಗದಗ ರೈಲ್ವೆ ಮಾರ್ಗದ ಮೂಲಕ ರೈಲು ಸಂಪರ್ಕ ಹೊಂದಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಮೀಪವೇ ಕೃಷ್ಣಾನದಿ ಇದೆ. ಪಟ್ಟಣದಿಂದ ದೂರದ ನಗರ ಪ್ರದೇಶಗಳಿಗೆ ಸಂಚರಿಸಲು ಬೀದರ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಇದೆ. ಗ್ರೇಡ್-1 ಪುರಸಭೆ ಇದ್ದು ಐದು ತಾಂಡಾಗಳು 50 ದೊಡ್ಡಿ, ಹಳ್ಳಿಗಳಿವೆ. ಹೀಗಾಗಿ ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ವ್ಯವಹಾರಿಕ ದೃಷ್ಟಿಯಿಂದ ಈ ಭಾಗದಲ್ಲಿ ಸಾಕಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಅಲ್ಲದೆ ಹಲವಾರು ಧಾರ್ಮೀಕ ಕೇಂದ್ರಗಳನ್ನು ಹೊಂದಿದೆ.  ತಿಂಥಣಿಯಲ್ಲಿ ಬಂಗಾರ ಮಿಶ್ರಿತ ಕಾಫರ್ ಕಂಪನಿ ಇದೆ. ಬೆಂಚಿಗಡ್ಡಿಯಲ್ಲಿ ವಿದ್ಯುತ್ ತಯಾರಕ ಘಟಕವಿದೆ. ತಾಲ್ಲೂಕಾ ಕೇಂದ್ರ ಮಾಡಲು ಸರಕಾರದ 2 ಸಾವಿರ ಎಕರೆ ಭೂಮಿ ಇದೆ. ವಸ್ತುಸ್ಥಿತಿ ಹೀಗಿದ್ದರೂ ಕೂಡ ಹಿಂದಿನ ಸರ್ಕಾರಗಳು ಕೇವಲ ಗ್ರಾಪಂ ಮತ್ತು ಪಟ್ಟಣ ಪಂಚಾಯತಿಗಳಿದ್ದ ಗ್ರಾಮಗಳನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿ ಕಕ್ಕೇರಾ ಪಟ್ಟಣವನ್ನು ಕಡೆಗಣಿಸಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

ADVERTISEMENT

‘ಮುಂಬರುವ ಬಜೆಟ್ ಮಂಡನೆಯಲ್ಲಿ ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಮತಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಸಂಸದರು ಮುಖ್ಯಮಂತ್ರಿಗಳ ಮೇಲೆ ತೀವ್ರ ಒತ್ತಡ ಹಾಕಬೇಕು. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿಓರ್ವ ಪಕ್ಷಾತೀತ ವ್ಯಕ್ತಿಯನ್ನು ಗೆಲ್ಲಿಸಲಾಗುವುದು’ ಎಂದು ರಾಜಕೀಯ ಪಕ್ಷಗಳಿಗೆ ಎ‌ಚ್ಚರಿಕೆ ನೀಡಿದರು.

ಬಂದ್ ವೇಳೆ ಕೆಲಕಾಲ ರಸ್ತೆ ಬಂದ್ ಮಾಡಿದ್ದರಿಂದ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕಾರ ನೀಡಿದ್ದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಪ್ರತಿಭಟನೆಕಾರರು ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ ಅವರಿಗೆ ಸಲ್ಲಿಸಿದರು. ಮುಂಜಾಗೃತಾ ಕ್ರಮವಾಗಿ ಪಿಎಸ್ಐ ರಾಜಶೇಖರ ರಾಠೋಡ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಿದ್ದರು.

ಪ್ರಮುಖರಾದ ಅಯ್ಯಣ್ಣ ಪೂಜಾರಿ, ದೇವಿಂದ್ರಪ್ಪ ಬಳಿಚಕ್ರ, ರಮೇಶ ಶೆಟ್ಟಿ, ಚಂದ್ರಕಾಂತ ಸಕ್ರಿ, ತಿಪ್ಪಣ್ಣ ಜಂಪಾ, ನಿಂಗಣ್ಣ ಬೂದಗುಂಪಿ, ಮಲ್ಲಣ್ಣಗೌಡ ಹೆಗ್ಗಣದೊಡ್ಡಿ, ಸುನೀಲ ಶೆಟ್ಟಿ, ಅಯೂಬ್, ಸಂಗಮೇಶ ಸುಬೇದಾರ್‌, ಮರೆಪ್ಪ ಕಾಂಗ್ರೆಸ್, ಮೌನೇಶ ಗುರಿಕಾರ, ಮಹಾಂತೇಶ ಶಿವಪೂಜಿ, ಗುಂಡಪ್ಪ ಗುರಿಕಾರ, ಆನಂದ ಭೋವಿ, ಬಸವರಾಜ ಹೊಸ್ಮನಿ, ಶಿವು ಗುಡಿದೊರೆ, ವಜಲಪ್ಪ, ಸೋಮರಾಯಗೌಡ, ಸೋಮು ಬನದೊಡ್ಡಿ, ಪರಮಣ್ಣ ದೊಡ್ಡಮನಿ, ಭೀಮಣ್ಣ ಮ್ಯಾಗೇರಿ, ಗೋವಿಂದ್ ಪತ್ತಾರ್, ಸೂಗುರೇಶ ಮಡ್ಡಿ, ಸೇರಿದಂತೆ ಹಲವಾರು ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.