ADVERTISEMENT

ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್: ತುಕ್ಕು ಹಿಡಿದ ಗೇಟ್ ಬದಲಾವಣೆಗೆ ₹ 75 ಕೋಟಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:36 IST
Last Updated 12 ಡಿಸೆಂಬರ್ 2025, 7:36 IST
ವಡಗೇರಾ ತಾಲ್ಲೂಕಿನ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್ ನೀರು ಸೋರಿ ಹೋಗದಂತೆ ರೈತರು ಗೇಟುಗಳಿಗೆ ಪ್ಲಾಸ್ಟೀಕ್ ಚೀಲಗಳನ್ನು ಅಳವಡಿಸಿರುವದು.
ವಡಗೇರಾ ತಾಲ್ಲೂಕಿನ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್ ನೀರು ಸೋರಿ ಹೋಗದಂತೆ ರೈತರು ಗೇಟುಗಳಿಗೆ ಪ್ಲಾಸ್ಟೀಕ್ ಚೀಲಗಳನ್ನು ಅಳವಡಿಸಿರುವದು.   

ವಡಗೇರಾ: ತಾಲ್ಲೂಕಿನ ಹತ್ತುಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ರೈತರು ಕುಡಿಯುವ ನೀರು ಮತ್ತು ಎರಡನೇ ಬೆಳೆಗೆ ನೀರಾವರಿ ಅನುಕೂಲವಾಗುವ ಭೀಮಾ ನದಿ ವ್ಯಾಪ್ತಿಯ ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‌ನ ಬಿಸಿಬಿ ಗೇಟು ಬದಲಾವಣೆ ಕಾರ್ಯ ವಿಳಂಬವಾಗುತ್ತಿದೆ. ಕೂಡಲೇ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಬುಧವಾರದ ಅಧಿವೇಶನದಲ್ಲಿ ಒತ್ತಾಯಿಸಿದರು.

ಯಾದಗಿರಿ ಮತಕ್ಷೇತ್ರದ ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಕಂದಳ್ಳಿ, ಅರ್ಜುಣಗಿ, ಕುಮನೂರ, ಗೋಡಿಹಾಳ, ಹಾಲಗೇರಾ, ಗಡ್ಡೆಸೂಗುರು,ಬಬಲಾದ ಮತ್ತು ವಡಗೇರಾ ಮತ್ತು ಗುರುಮಠಕಲ್ ಕ್ಷೇತ್ರದ ಏಳು ಗ್ರಾಮಗಳಿಗೆ ಇದರ ಉಪಯೋಗವಾಗಲಿದೆ ಎಂಬ ಮಾಹಿತಿ ಶಾಸಕರು ಸಚಿವರ ಗಮನಕ್ಕೆ ತಂದರು.

ಈ ವೇಳೆ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಮಾತನಾಡಿ, ‘2001ರಲ್ಲಿ ನಿರ್ಮಿತವಾದ ಬಿಸಿಬಿಯ ಗೇಟುಗಳಲ್ಲಿ ಲೀಕೇಜ್(ಸೋರಿಕೆ) ಗಂಭೀರವಾಗಿದ್ದು, ಮ್ಯಾನುಯಲ್ ಗೇಟುಗಳನ್ನು ತಂತ್ರಜ್ಞಾನದ ವಿದ್ಯುತ್ ಚಾಲಿತ(ಮೇಕ್ಯಾನಿಕಲ್ ವರ್ಟಿಕಲ್) ಗೇಟುಗಳಿಗೆ ಬದಲಿಸಲು ₹ 75 ಕೋಟಿ ನೂತನವಾಗಿ (ಅಂದಾಜು ಪಟ್ಟಿ) ಲೇಟೆಸ್ಟ್ ಎಸ್ಟಿಮೇಟ್ ಸಿದ್ಧವಾಗಿದೆ’ ಎಂದರು.

ADVERTISEMENT

ಇಷ್ಟಕ್ಕೆ ಸಮಾಧಾನವಾಗದ ಶಾಸಕರು, ನನ್ನ ಈ ಪ್ರಶ್ನೆಗೆ ಸರ್ಕಾರ ಎರಡು ವರ್ಷಗಳಿಂದ ಒಂದೇ ರೀತಿಯ ಉತ್ತರ ನೀಡುತ್ತಿದೆ. ₹ 62 ಕೋಟಿಯ ಅಂದಾಜು ವೆಚ್ಚ ಈಗ ₹ 75 ಕೋಟಿಗೆ ಏರಿದೆ. ಹೀಗೆ ಮುಂದೂಡುತ್ತ ಹೋದಂತೆ ವೆಚ್ಚ ಇನ್ನೂ ಹೆಚ್ಚಾಗುತ್ತದೆ. ರೈತರಿಗೆ ದಿನದಿಂದ ದಿನಕ್ಕೆ ತೊಂದರೆ ಹೆಚ್ಚುತ್ತಿದೆ. ಹತ್ತು ಹಳ್ಳಿಗಳ ಬೆಳೆ ಹಾಗೂ ಕುಡಿಯುವ ನೀರು ಕಂದಳ್ಲಿ ಬ್ರೀಜ್ ಕಂ ಬ್ಯಾರೇಜ್ ಮೇಲೆ ಅವಲಂಬಿತವಾಗಿದೆ. ಕೆಲಸವನ್ನು ಯಾವಾಗ ಮಾಡಿಸುವಿರಿ? ಎಂದು ಸಚಿವರನ್ನು ಮರು ಪ್ರಶ್ನಿ ಸಿದರು. ಆಗ ಸಚಿವರು ಮುಂದಿನ ಬಜೆಟ್‌ನಲ್ಲಿ ಮೆಂಟೆನನ್ಸ್ ಹೆಡ್ (ನಿರ್ವಹಣಾ ವೆಚ್ಚ) ಅಡಿ ಪ್ರಥಮ ಆದ್ಯತೆ ಮೆರೆಗೆ ನೆರವು ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ವಡಗೇರಾ ಮಳೆಗಾಲದಲ್ಲಿ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್ ನಲ್ಲಿ ತುಂಬಿ ಹರಿಯುತ್ತಿರುವ ಭೀಮಾ ನದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.