ADVERTISEMENT

ಯಾದಗಿರಿ: ಶಿಬಾರಬಂಡಿ ಗ್ರಾಮಕ್ಕೆ ಸೌಕರ್ಯ ಒದಗಿಸಿ

ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 5:18 IST
Last Updated 19 ಅಕ್ಟೋಬರ್ 2021, 5:18 IST
ಸುರಪುರ ತಾಲ್ಲೂಕಿನ ಖಾನಾಪುರ ಎಸ್.ಎಚ್. ಗ್ರಾಮ ಪಂಚಾಯಿತಿ ಕಚೇರಿ ಎದುರು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು
ಸುರಪುರ ತಾಲ್ಲೂಕಿನ ಖಾನಾಪುರ ಎಸ್.ಎಚ್. ಗ್ರಾಮ ಪಂಚಾಯಿತಿ ಕಚೇರಿ ಎದುರು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು   

ಖಾನಾಪುರ ಎಸ್.ಎಚ್. (ಸುರಪುರ): ಶಿಬಾರಬಂಡಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಖಾನಾಪುರ ಎಸ್.ಎಚ್. ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರವಿನಾಯಕ ಭೈರಿಮರಡಿ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಯ ಶಿಬಾರಬಂಡಿ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಗ್ರಾಮದ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ’ ಎಂದು ದೂರಿದರು.

‘ಜನರು ಗುಡ್ಡಗಾಡಿನಲ್ಲೇ ತಿರುಗಾಡಬೇಕು. ಕುಡಿವ ನೀರಿಗಾಗಿ 4-5 ಕಿ.ಮೀ ದೂರ ಸಂಚರಿಸಬೇಕು. ಶವ ಹೂಳಲು ಪರದಾಡುವಂತಾಗಿದೆ. ಶಾಲೆಗೆ ಕಟ್ಟಡ ಇಲ್ಲದಿರುವುದರಿಂದ ಗಿಡದ ನೆರಳಿನಲ್ಲಿ ಓದುವಂತಾಗಿದೆ. ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರ ಪಡಿಪಾಟಲು ದೇವರೇ ಬಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮದಲ್ಲಿ ಮತ್ತು ಮುಖ್ಯ ರಸ್ತೆಗೆ ಉತ್ತಮ ಸಂಪರ್ಕ ರಸ್ತೆ ನಿರ್ಮಿಸಬೇಕು. ಗ್ರಾಮದ ಎಲ್ಲ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಮಹಿಳಾ ಶೌಚಾಲಯ ಕಟ್ಟಬೇಕು. ಶಾಲೆಗೆ ಕಟ್ಟಡ ಮಂಜೂರಿ ಮಾಡಬೇಕು. ರುದ್ರಭೂಮಿ ಒದಗಿಸಬೇಕು. ವಿಳಂಬವಾದರೆ ಪ್ರತಿಭಟನೆ ಚುರುಕುಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಶರಣಪ್ಪ ಡಿಬಾಸ್, ಮಲ್ಲುನಾಯಕ ಕಬಾಡಗೇರಾ, ಗೋಪಾಲನಾಯಕ ದೇವರಮನಿ, ಯಲ್ಲಪ್ಪನಾಯಕ ಕಬಾಡಗೇರಾ, ಬಸವರಾಜ ಪಾಟೀಲ ಶಾಖಾಪುರ, ರವಿಕಿರಣ ಸಿದ್ದಾಪುರ, ರಂಗನಾಥ ರಾಮಬಾಣ, ನಬಿಶಾ, ಶಿವರಾಜ ವಗ್ಗರ ದೀವಳಗುಡ್ಡ, ದೇವುನಾಯಕ ಜಾಲಿಬೆಂಚಿ ಹಾಗೂ ಮೌನೇಶ ರಾಮಬಾಣ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.