ADVERTISEMENT

ಯಾದಗಿರಿ: ಪ್ರತಿಭಟನೆಗೆ ಸಿಮೀತವಾದ ಕರ್ನಾಟಕ ಬಂದ್‌

ಮರಾಠಾ ಅಭಿವೃದ್ಧಿ ನಿಗಮ ಹಿಂಪಡೆಯಲು ಆಗ್ರಹ; ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 5:09 IST
Last Updated 6 ಡಿಸೆಂಬರ್ 2020, 5:09 IST
ಯಾದಗಿರಿಯ ಸುಭಾಷ ವೃತ್ತದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆಣಸಿನಕಾಯಿ ತಿನ್ನುವ ಮೂಲಕ ಖಾರವಾದ ಪ್ರತಿಭಟನೆ ಮಾಡಿದರು 2) ಯಾದಗಿರಿಯ ಸುಭಾಷ ವೃತ್ತದ ಸಮೀಪದ ಶನಿವಾರ ಎಂದಿನಂತೆ ಹೂವು, ಹಣ್ಣುಗಳ ವ್ಯಾಪಾರ ವಹಿವಾಟು ನಡೆಯಿತು 3) ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ರಾಜ್ಯ ಬಂದ್ ಗೆ ಬೆಂಬಲಿಸಿ ಕರವೇ ( ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಯಾದಗಿರಿಯ ಸುಭಾಷ ವೃತ್ತದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆಣಸಿನಕಾಯಿ ತಿನ್ನುವ ಮೂಲಕ ಖಾರವಾದ ಪ್ರತಿಭಟನೆ ಮಾಡಿದರು 2) ಯಾದಗಿರಿಯ ಸುಭಾಷ ವೃತ್ತದ ಸಮೀಪದ ಶನಿವಾರ ಎಂದಿನಂತೆ ಹೂವು, ಹಣ್ಣುಗಳ ವ್ಯಾಪಾರ ವಹಿವಾಟು ನಡೆಯಿತು 3) ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ರಾಜ್ಯ ಬಂದ್ ಗೆ ಬೆಂಬಲಿಸಿ ಕರವೇ ( ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಯಾದಗಿರಿ: ಮರಾಠ ಅಭಿವೃದ್ಧಿ ನಿಗಮ ಘೋಷಿಸಿ ₹ 50 ಕೋಟಿ ಅನುದಾನ ನೀಡಿದ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳ ಮುಖಂಡರು ಬಂದ್‌ಮಾಡಿಪ್ರತಿಭಟನೆ ನಡೆೆಸಿದರು.

ಶನಿವಾರ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ವಹಿವಾಟು ಎಂದಿನಂತೆ ನಡೆಯಿತು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ‘ಬಂದ್‌’ ಮಾಡಿಸುವ ಗೊಡವೆಗೆ ಹೋಗಲಿಲ್ಲ. ಜನ ಸಂಚಾರ ಎಂದಿನಂತೆ ಕಂಡು ಬಂದಿತು.

ಬಸ್‌, ಆಟೊ, ಅಂಗಡಿ ಮುಂಗಟ್ಟು ಎಂದಿನಂತೆ ವ್ಯಾಪಾರ ನಡೆಯಿತು. ಶನಿವಾರ ಬೆಳಿಗ್ಗೆ 11 ಗಂಟೆಗೆ ಸುಭಾಷ ವೃತ್ತ, ರೈಲ್ವೆ ಮೇಲ್ಸೆತುವೆ ಬಳಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ADVERTISEMENT

ಕನ್ನಡಿಗರ ಭಾವನೆಗಳನ್ನು ಗೌರವಿಸದೆ ರಾಜ್ಯ ಸರ್ಕಾರ ಮರಾಠಿಗರನ್ನು ಓಲೈಸಲು ನಿಗಮ ರಚಿಸಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು. ಇದಕ್ಕೆ ಧಕ್ಕೆ ಬಂದರೆ ಕನ್ನಡಿಗರು ಸುಮ್ಮನಿರುವುದಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದ ಸುಭಾಷ ವೃತ್ತದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಟೈರ್‌ ಸುಟ್ಟು ಕನ್ನಡ ವಿರೋಧಿ ನೀತಿಯನ್ನು ಖಂಡಿಸಿದರು.

ರಾಜ್ಯ ಹೆದ್ದಾರಿ ರಸ್ತೆತಡೆದು ಪ್ರತಿಭಟನೆ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ರೈಲ್ವೆ ಮೇಲ್ಸೆತುವೆ ಮೇಲೆ 20 ನಿಮಿಷ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದರಿಂದ ಕೆಲ ಕಾಲ ವಾಹನಗಳು ಅಲ್ಲಲ್ಲಿ ನಿಂತಿದ್ದವು.

ಕರವೇತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಜಿಲ್ಲಾ ಮುಖಂಡರಾದ ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಅಬ್ದುಲ್ ಅಜೀಜ್, ವಿಜಯ ರಾಠೋಡ, ಸೈದಪ್ಪ ಗೌಡಗೇರಿ, ಮಹೇಶ ಠಾಣಗುಂದಿ, ದೇವಸಿಂಗ್ ಮಾಧ್ವಾರ, ವೆಂಕಟರೆಡ್ಡಿ ಕೌಳೂರು, ರಾಜು ಗೌಡಗೇರಿ, ಸಿದ್ದು ಸಾಹುಕಾರ ಠಾಣಗುಂದಿ, ಈಶಪ್ಪ ಠಾಣಗುಂದಿ, ಸುಭಾಷ ಯರಗೋಳ, ಮೌನೇಶ ಮಾಧ್ವಾರ, ಭೀಮು ಶೆಟ್ಟಿಕೇರ, ಭೀಮು ಬಸಂತಪುರ, ಸಿದ್ದಪ್ಪ ಕ್ಯಾಸಪನಳ್ಳಿ ಸೇರಿದಂತೆ ಕಾರ್ಯಕರ್ತರು ಇದ್ದರು.

ನಿಗಮ ಬೇಡ; ಸೌಲಭ್ಯ ಕಲ್ಪಿಸಿ: ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ವತಿಯಿಂದ ನಗರದ ಸುಭಾಷ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಮರಾಠ ಅಭಿವೃದ್ಧಿ ನಿಗಮ ಮಾಡದೆ ಮರಾಠ ಸಮುದಾಯಕ್ಕೆ ಸೌಲಭ್ಯ ನೀಡಿ 2 ಎ ವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು. ಎಲ್ಲ ಭಾಷಿಕರಿಗೆ ನಿಗಮ ಮಾಡುವ ಬದಲು ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮರಾಠ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ನೀಡಲಾಗಿದೆ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹5 ಕೋಟಿ ನೀಡಲಾಗಿದೆ. ಯಾವ ಲೆಕ್ಕ ಎಂದು ಪ್ರಶ್ನಿಸಿರುವ ಪದಾಧಿಕಾರಿಗಳು, ಕನ್ನಡ ಪ್ರಾಧಿಕಾರಕ್ಕೆ ಕೂಡಲೇ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಸಿದ್ದು ರಡ್ಡಿ, ಬಸವ, ಶರಣು ಇಟಗಿ, ಶಿವು ಸೇರಿದಂತೆ ಕಾರ್ಯಕರ್ತರು ಇದ್ದರು.

ಹುಣಸಗಿ: ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೊಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣ ಸೇರಿದಂತೆ ವಿವಿಧೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ವಾಹನ ಸಂಚಾರ ಎಂದಿನಂತಿತ್ತು. ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕರವೇ (ನಾರಾಯಣಗೌಡ ಬಣ) ತಾಲ್ಲೂಕು ಘಟಕದ ಸದಸ್ಯರು ತಹಶೀಲ್ದಾರ್‌ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಕೊಡೇಕಲ್ಲದಲ್ಲಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟನಾ ಮೆರಣಿಗೆ ನಡೆಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಹೊಕ್ರಾಣಿ, ಮುಖಂಡ ರಮೇಶ ಬಿರಾದಾರ ಮಾತನಾಡಿದರು.

ನಂತರ ಕಂದಾಯ ನಿರಿಕ್ಷಕ ಬಸವರಾಜ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸುರೇಶ ದೇವೂರ, ದೇವರಾಜ ಪಾಟೀಲ, ಅಮರೇಶ ನೂಲಿ, ಮಲ್ಲು ಕುಂಬಾರ, ಕಾಂತು ಗುತ್ತೇದಾರ, ಹಣಮಂತ್ರಾಗೌಡ ಪೊಲೀಸ್ ಪಾಟೀಲ, ನಿಂಗಣ್ಣ, ನಾನಾಗೌಡ, ತಿರುಪತಿ ಹಳಿಮನಿ, ಬಸವರಾಜ ತಳ್ಳಳ್ಳಿ ಇದ್ದರು.

ಹುಣಸಗಿ ಪಟ್ಟಣದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸದಸ್ಯರು ಗ್ರೇಡ್– 2 ತಹಶಿಲ್ದಾರ್ ಪವಾರ್ ಅವರಿಗೆ ಮನವಿ ಸಲ್ಲಿಸಿದರು. ಶಿವು ಮಾಳನೂರ, ನಂದನಗೌಡ ಬಿರಾದಾರ, ನಿಂಗಣ್ಣ ಗುತ್ತೇದಾರ, ಶರಣಮ್ಮ ದೊಡ್ಡಮನಿ, ರಾಜು ಬಲಶೆಟ್ಟಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.