ADVERTISEMENT

ಪಂಚರತ್ನ ಯಾತ್ರೆ| ಯಾದಗಿರಿಯಲ್ಲಿ ಎಚ್‌ಡಿಕೆಗೆ ಪೆನ್ಸಿಲ್‌, ಪುಸ್ತಕದ ಮಾಲೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 15:59 IST
Last Updated 23 ಮಾರ್ಚ್ 2023, 15:59 IST
   

ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದಲ್ಲಿ ನಡೆಯುತ್ತಿರುವ ಪಂಚರತ್ನ ಯೋಜನೆ ಹಲವು ವಿಶೇಷಗಳಿಂದ ಕೂಡಿತ್ತು.

ಚಕ್ರದಿಂದ ತಯಾರಿಸಿದ ಅದ್ದೂರಿ ಹೂವಿನ ಮಾಲೆಯನ್ನು ಕ್ರೇನ್ ಮೂಲಕ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಕಿ ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಪಂಚರತ್ನ ಯಾತ್ರೆಯ ಉದ್ದೇಶವುಳ್ಳ ಕಾರ್ಯಕ್ರಮದ ಅಂಶಗಳಾದ ಕಂಪಾಸ್, ಪೆನ್ಸಿಲ್ ಮತ್ತು ಪುಸ್ತಕ ಹೂವಿನ ಮಾಲೆಯಿಂದ ಸನ್ಮಾನಿಸಲಾಯಿತು.

ADVERTISEMENT

ಭಾಜಾ ಭಜಂತ್ರಿಯಿಂದ ಯರಗೋಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ರಸ್ತೆ ಮೇಲೆ ಮೆರವಣಿಗೆ ನಡೆಸಿದರು. ವಿದ್ಯುತ್ ದೀಪಗಳ ಕೊಡೆಗಳಿಂದ ಅಲಂಕಾರದಿಂದ ಗಮನ ಸೆಳೆದರು.

ಸಾವಿರಕ್ಕೂ ಹೆಚ್ಚು ಸ್ವಯಂ ಕಾರ್ಯಕರ್ತರು ತಲೆ ಮೇಲೆ ಜೆಡಿಎಸ್ ಚಿಹ್ನೆಯುಳ್ಳ ಕ್ಯಾಪ್ ಹಾಕಿ ಮತ್ತು ಈ ಸಲ ಜೆಡಿಎಸ್ ನನ್ನ ಮತ ಎಂಬ ಉಲ್ಲೇಖ ಇರುವ ಟಿಶರ್ಟ್ ಧರಿಸಿ ಕಾರ್ಯಕ್ರಮಕ್ಕೆ ಬಂದಂತ ಕಾರ್ಯಕರ್ತರನ್ನು ಶಿಸ್ತು ಆಗಿ ಕುಳಿತುಕೊಳ್ಳಲು ನೆರವಾದರು. ವೃದ್ಧರಿಗೆ ಮತ್ತು ಮಹಿಳೆಯರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿ ಸಹಕರಿಸಿದರು.

ಸಾವಿರಾರು ಮಹಿಳೆಯರು ಹಸಿರು ಇಳಕಲ್ ಸೀರೆ ಧರಿಸಿ ತಲೆ ಮೇಲೆ ಹುಲ್ಲಿನ ಹೊರೆ ಹೊತ್ತು ಕುಂಭ ಕಲಶ ಹೊತ್ತು ಗಮನ ಸೆಳೆದರು.

ಯಾದಗಿರಿ ಜಿಲ್ಲಾ ಕೇಂದ್ರದಿಂದ 18 ಕಿ.ಮಿ ದೂರದ ಯರಗೋಳ ಗ್ರಾಮ ದವರೆಗೆ ರಸ್ತೆಯ ಎಡ ಬಲ ಭಾಗಕ್ಕೂ ಜೆಡಿಎಸ್ ಪಕ್ಷದ ಚಿಹ್ನೆಯುಳ್ಳ ಬ್ಯಾನರ್, ಕಟೌಟ್ ಗಳು ರಾರಾಜಿಸಿದವು.

ವೇದಿಕೆ ಎಡ ಭಾಗಕ್ಕೆ ಆಯೋಜಿಸಿದ ಲೇಸರ್ ಶೋ ಮೂಲಕ ಪಕ್ಷದ ಸಾಧನೆಗಳು ಕುರಿತು ಪ್ರದರ್ಶನ ಮಾಡಲಾಯಿತು.
ಯಡ್ಡಳ್ಳಿ ಗ್ರಾಮದ ನೂರಾರು ಕಾರ್ಯಕರ್ತರು ಯರಗೋಳ ಗ್ರಾಮಕ್ಕೆ ಅಂದಾಜು 25 ಕಿ.ಮಿ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿದರು.

ಗೋಧಿ ಪಾಯಸದಿಂದ ಕಾರ್ಯಕರ್ತರು ಸಿಹಿಯನ್ನು ಸವಿದರು. ಬೆಳಿಗ್ಗೆಯಿಂದ ಸಂಜೆ ವರೆಗೆ ಕಾರ್ಯಕರ್ತರಿಗೆ ಭರ್ಜರಿ ಊಟದ ವ್ಯವಸ್ಥೆ ನಡೆದಿತ್ತು.

ಗುರುಮಠಕಲ್ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣು ಗೌಡ ಕಂದಕೂರ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಧಾನಸೌಧದ ಮಾದರಿ ಕಾಣಿಕೆಯಾಗಿ ಕೊಟ್ಟಿರುವುದು ವಿಶೇಷವಾಗಿತ್ತು.

ಶಾಸಕ ಬಂಡೆಪ್ಪ ಖಾಶೆಂಪುರ ಮಾತನಾಡಿ, 130 ಸ್ಥಾನಗಳಲ್ಲಿದ್ದ ಕಾಂಗ್ರೆಸ್‌ 70ಕ್ಕೆ ಇಳಿಸಿದ್ದಾರು? ಈಗ ಅವರು 60-65ಕ್ಕೆ ಇಳಿದಿದ್ದಾರೆ. ಈಗ ಗ್ಯಾರಂಟಿ ನಂ.1, 2, 3, 4 ಎಂದು ಕೊಡುತ್ತಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಛತ್ತಿಸಗಡ, ರಾಜಸ್ಥಾನದಲ್ಲಿ ಈ ಗ್ಯಾರಂಟಿಗಳು ಕೊಡಿ ಎಂದು ಹೇಳಿದರು‌.‌

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಈವರೆಗೆ ಸರ್ಕಾರ ನಿಮ್ಮದೇ ಇತ್ತು. ತಾಕತ್ತಿದ್ದರೆ ರೈತರ ಪರ ಕೆಲಸ ಮಾಡಬೇಕಿತ್ತು. ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಕಾಂಗ್ರೆಸ್‌ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನವರು ನಿಮಗೆ ಕಡಿಮೆ ಸ್ಥಾನ ಬಂದಿದೆ ಯಾಕೆ ಸಾಲ ಮನ್ನಾ ಮಾಡುತ್ತೀರಿ? ಎಂದರೂ ಬದ್ಧತೆಯಿಂದ ಸಾಲ ಮನ್ನಾ ಮಾಡಲಾಗಿತ್ತು.

ಈ ಬಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ತೆಲಂಗಾಣ ಮಾದರಿಯಲ್ಲಿ ರೈತರಿಗೆ ಎಕರೆಗೆ ₹10 ಸಾವಿರ ಪ್ರೋತ್ಸಾಹ ಧನದ ರೈತ ಬಂಧು ಯೋಜನೆ, ರೈತ ಕುಟುಂಬದ ಯುವತಿಯನ್ನು ಮದುವೆಯಾದರೆ ಅವರಿಗೆ ₹ 2 ಲಕ್ಷ ಕಲ್ಯಾಣ ಲಕ್ಷ್ಮೀ, ಮಹಿಳಾ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಪಡೆದ ಸಂಪೂರ್ಣ ಸಾಲ ಮನ್ನಾ,‌ ಸಂಧ್ಯಾ ಸುರಕ್ಷಾದ ₹1,200 ಬದಲಿಗೆ ₹5 ಸಾವಿರ ಮಾಸಿಕ ವೇತನ, ಅಂಗವಿಕಲರಿಗೆ ₹2 ಸಾವಿರ, ರೈತರಿಗೆ 24 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.