ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅತ್ತೆ-ಸೊಸೆ ಜಗಳ: ಸಿ.ಎಂ.ಇಬ್ರಾಹಿಂ ಲೇವಡಿ

ಶಹಾಪುರ: ಶಿರವಾಳ ಪರ ಸಿ.ಎಂ.ಇಬ್ರಾಹಿಂ ಪ್ರಚಾರ; ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ಬಗ್ಗೆ ಲೇವಡಿ

​ಪ್ರಜಾವಾಣಿ ವಾರ್ತೆ
Published 5 ಮೇ 2023, 14:39 IST
Last Updated 5 ಮೇ 2023, 14:39 IST
ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಅವರ ಪರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮತಯಾಚಿಸಿದರು
ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಅವರ ಪರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮತಯಾಚಿಸಿದರು   

ಶಹಾಪುರ: ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೊಳಿಸುವ ಯೋಜನೆ ಅತ್ತೆ-ಸೊಸೆಯಂದಿರ ನಡುವೆ ಜಗಳ ಹಚ್ಚುತ್ತವೆ. ಮನೆ ಯಜಮಾನನಿಗೆ ₹2000 ನೀಡಲಾಗುತ್ತದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಅತ್ತೆಗೆ ಕೊಡಬೇಕೋ ಅಥವಾ ಸೊಸೆಗೆ ಕೊಡಬೇಕೋ ಎಂದು ಮನೆಯಲ್ಲಿಯೇ ಜಗಳ ಹಚ್ಚುವ ಯೋಜನೆ ಇದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಕಳೆದ ಬಾರಿ ವೀರಶೈವ ಲಿಂಗಾಯತ ಮತ ಬ್ಯಾಂಕ್ ಒಡೆಯುವ ಹುನ್ನಾರ ನಡೆಸಿದ ಸಿದ್ದರಾಮಯ್ಯ ಚುನಾವಣೆಯಲ್ಲಿ ಮಣ್ಣುಮುಕ್ಕಿದರು. ಬೇಡ ಜಂಗಮರನ್ನು ಎಸ್ಸಿಗೆ ಸೇರಿಸುವ ವಿಷಯದಲ್ಲಿ ಕೈ ಹಾಕಿ ಕೈ ಸುಟ್ಟುಕೊಂಡರು. ಮುಸ್ಲಿಂ ಸಮುದಾಯಕ್ಕೆ ಶೇ 4 ಮೀಸಲಾತಿ ಕಲ್ಪಿಸಿದ್ದು, ಇದೇ ದೇವೇಗೌಡರು ಎಂಬುದನ್ನು ಮರೆಯಬೇಡಿ ಎಂದರು.

ADVERTISEMENT

ಸೋಲಿನ ಭಯದಿಂದ ಕಾಂಗ್ರೆಸ್, ಬಿಜೆಪಿಯವರು ಈ ಚುನಾವಣೆಯಲ್ಲಿ ಗೆಲವು ಸಾಧಿಸಲು ರಾತ್ರಿ ಕೆಲಸ ಶುರು ಮಾಡುತ್ತಾರೆ. ಆ ಬಗ್ಗೆ ಎಚ್ಚರವಾಗಿರಿ. ನಿಮ್ಮ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ನಾನು ಚಿರಋಣಿ ಎಂದು ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಮನವಿ ಮಾಡಿದರು.

ಮಾಜಿ ಎಂಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ ಸಾಹು, ಲಕ್ಷಿಕಾಂತು ಪಾಟೀಲ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪ ಮೋಸಂಬಿ, ಲಾಲಹ್ಮದ್ ಖುರೇಶಿ, ಶಿವಕುಮಾರ್ ಮೋಟಿಗಿ, ಶ್ರೀಕಾಂತ್ ಸುಬೇದಾರ್, ಸಿದ್ದಪ್ಪ ನಂದಿಕೋಲ. ರಾಮನಗೌಡ ಕೊಲ್ಲೂರ, ಸಾಲೋಮಲ್ ಆಲ್ಫ್ರೇಡ್ ವಾಸುದೇವ ಕಟ್ಟಿಮನಿ, ವಿಠಲ್ ವಗ್ಗಿ, ಮಲ್ಲಿಕಾರ್ಜುನ ಗಂಧದಮಠ, ಅಪ್ಪಣ್ಣ ದಶವಂತ್, ಮಾಪಣ್ಣ ಮದ್ರಿಕಿ, ದಿನೇಶ್ ಜೈನ್, ಶೇಖರ್ ದೊರಿ, ರವಿ ನರಸನಾಯಕ್, ಪ್ರಭುರಡ್ಡಿ ಇದ್ದರು.

5ಎಸ್ಎಚ್ಪಿ 1(2): ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನತೆ

‘ಜಗದೀಶ ಶೆಟ್ಟರ್ ಹಾಕಿದ್ದು ಯಾವ ಚಡ್ಡಿ’

ಶಹಾಪುರ: ‘ಗುರು ಪಾಟೀಲರು ಹಾಕಿರುವದು ಬಿಜೆಪಿ ಚಡ್ಡಿ ಎಂದು ಹೇಳುವ ಜಮೀರ್ ಅಹ್ಮದ್ ಖಾನ್ ಅವರೇ ಜಗದೀಶ ಶೆಟ್ಟರ್ ಯಾವ ಚಡ್ಡಿನೇ ಹಾಕಿಲ್ಲವೇನು? ನೀವೇ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ಇವತ್ತು ಚುನಾವಣೆಗೆ ನಿಲ್ಲಿಸಿದ್ದೀರಿ ಅವರು ಹಾಕಿದ ಯಾವ ಚಡ್ಡಿಯಪ್ಪಾ’ ಎಂದು ಸಿ.ಎಂ.ಇಬ್ರಾಹಿಂ ಅವರು ಜಮೀರ ಅಹ್ಮದ ಖಾನ್ ಅವರನ್ನು ಪ್ರಶ್ನಿಸಿದರು. ಗುರು ಪಾಟೀಲ್ ಸಜ್ಜನರ ಪಕ್ಷಕ್ಕೆ ಬಂದಿದ್ದಾರೆ. ಹಿಂದೂ–ಮುಸ್ಲಿಂ ಒಂದಾಗಿ ಬಾಳಲಿ ಎಂಬ ಆಶಾಭಾವನೆಯಿಂದ ನಾನು ಕೆಲಸ ಮಾಡುತ್ತಿದ್ದೇನೆ ಹೊರತು ಯಾವ ಅಧಿಕಾರದ ಆಸೆಗಾಗಿ ಅಲ್ಲ. ಮುಸ್ಲಿಂ ಬಂಧುಗಳೇ ಶಾಂತಿ ಸುವ್ಯವಸ್ಥೆ ಸಮೃದ್ಧತೆ ಹೊಂದಿದ ನಾಡು ನಮ್ಮದಾಗ ಬೇಕಿದ್ದರೆ ಕನ್ನಡದ ಅಸ್ಮಿತೆ ಹೊಂದಿದ ಜೆಡಿಎಸ್‌ಗೆಗೆ ಮತ ಹಾಕುವ ಮೂಲಕ ಆಶೀರ್ವದಿಸಿ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.