ಯಾದಗಿರಿ: ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯಿಂದ ಒಳಹರಿವು ಹೆಚ್ಚಿದ್ದು, ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸದ್ಯ 25 ಗೇಟ್‌ಗಳ ಮೂಲಕ 2.50 ಲಕ್ಷ ಕ್ಯುಸೆಕ್ ನೀರು ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಹರಿಸಿದರೆ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದ ರಾಯಚೂರು-ಕಲಬುರಗಿ ಸಂಪರ್ಕ ಸೇತುವೆ ಕಡಿತವಾಗಲಿದೆ. ಇದರಿಂದ ಸುಮಾರು 90 ಕಿಮೀ ಸುತ್ತುವರಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ.
ರೈತರು ನದಿಗೆ ಅಳವಡಿಸಿದ್ದ ಮೋಟರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಪ್ರವಾಹ ಸಂಭವಿಸುವ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿದೆ. ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಮತ್ತು ಕೃಷ್ಣಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿನ ಮಳೆಯನ್ನು ಪರಿಗಣಿಸಿ ನಾರಾಯಣಪುರ ಅಣೆಕಟ್ಟಿನ ಒಳಹರಿವು ಸುಮಾರು 3 ಲಕ್ಷ ಕ್ಯುಸೆಕ್ ಆಗುವ ಸಾಧ್ಯತೆಯಿದೆ ಎಂದು ಡ್ಯಾಂ ಮೂಲಗಳು ತಿಳಿಸಿವೆ.
ನೀರಿನ ಸುರಕ್ಷಿತ ಮಟ್ಟ ಕಾಯ್ದುಕೊಳ್ಳಲು, ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ಹೊರಹರಿವನ್ನು ಗುರುವಾರ ಸಂಜೆ 5ರಿಂದ ರಾತ್ರಿ 9ರ ವರೆಗಿನ ಅವಧಿಯಲ್ಲಿ 2.50 ಲಕ್ಷ ಕ್ಯುಸೆಕ್‌ನಿಂದ 3 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗುವುದು. ಒಳಹರಿವಿನ ಆಧಾರದ ಮೇಲೆ ಕೃಷ್ಣಾ ನದಿಗೆ ಮತ್ತಷ್ಟು ಹೊರಹರಿವನ್ನು ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನದಿ ಪಾತ್ರದಲ್ಲಿ ಪ್ರವಾಹ ಸಾಧ್ಯತೆ: ಮುನ್ನೆಚ್ಚರಿಕೆಗೆ ಸೂಚನೆ
ಯಾದಗಿರಿ: ಕೃಷ್ಣಾ ನದಿಗೆ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 3ಲಕ್ಷ ಕ್ಯೂಸೆಕ್ ನೀರು ಹರಿ ಬಿಡುತ್ತಿರುವ ಕಾರಣ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಸಾಧ್ಯತೆಯಿದ್ದು ಜನ ನದಿಗೆ ಇಳಿಯದಂತೆ ಮತ್ತು ತಮ್ಮ ಜಾಣುವಾರುಗಳ ಸ ಮೇತಿ ಸುರಿಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಜಿಲ್ಲಾಧೀಕಾರಿ ಸುಶೀಲಾ ಬಿ. ಅವರು ಕೋರಿದ್ದಾರೆ.
ಸಹಾಯವಾಣಿ ಕೇಂದ್ರ ಆರಂಭ
ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳಲ್ಲಿ ದಿನವಿಡೀ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರ ಆರಂಭಿಸಿದ್ದು ಜನತೆಗೆ ಈ ಕುರಿತು ಸಮಸ್ಯೆ ದೂರುಗಳಿದ್ದರೆ ಕರೆ ಮಾಡಲು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಹಾಯವಾಣಿ ಕೇಂದ್ರ (08473-253950)
ಆಯಾ ತಹಶೀಲ್ದಾರ್ ಕಚೇರಿಗಳಲ್ಲಿನ ಸಹಾಯವಾಣಿ ಕೇಂದ್ರಗಳು
ಯಾದಗಿರಿ(ಮೊ. 99011 12994 08473-253611)
ಶಹಾಪುರ(94483 33545 08479-243321)
ಸುರಪುರ (9980265830 08443 256043)
ವಡಗೇರಾ (94497 33123 63600 77481)
ಹುಣಸಗಿ (99451 03885 90191 32429) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.