ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಿಸಿದ ವಿದ್ಯಾರ್ಥಿಗಳು
ಯಾದಗಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಗಿರಿ ಜಿಲ್ಲೆ ಮತ್ತೆ ಕೊನೆ ಸ್ಥಾನದಲ್ಲಿ ಉಳಿದಿದೆ.
2023ರಲ್ಲಿ ಜಿಲ್ಲೆಯೂ 35 ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯೂ 35 ಸ್ಥಾನ ಪಡೆದು ಕೆಳಗಡೆಯಿಂದ ಮೊದಲ ಸ್ಥಾನದಲ್ಲಿದೆ. 18,880 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 9,551 ಉತ್ತೀರ್ಣರಾಗಿದ್ದಾರೆ. ಶೇ 50.59 ಫಲಿತಾಂಶ ಬಂದಿದೆ.
ಆವಿಷ್ಕಾರ ಹೆಸರಿನಡಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಕಸರತ್ತು ನಡೆಸಿತ್ತು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಕೊನೆ ಸ್ಥಾನ ಗಟ್ಟಿಯಾಗಿದೆ.
ಶಿಕ್ಷಕರಿಲ್ಲದ ಶಾಲೆಗಳು: ಈ ಬಾರಿ ಶಾಲೆಗಳಲ್ಲಿ ಸಮರ್ಪಕ ಶಿಕ್ಷಕರಿಲ್ಲದ ಕಾರಣ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ 1,435 ಮಂಜೂರಾದ ಶಾಲೆಗಳಿದ್ದು, 670 ಶಿಕ್ಷಕರ ಹುದ್ದೆಗಳು ಖಾಲಿ ಖಾಲಿ ಇವೆ. ಇದು ಫಲಿತಾಂಶ ಇಳಿಕೆಗೆ ಕಾರಣವಾಗಿದೆ. 122 ಪ್ರೌಢಶಾಲೆಗಳಿದ್ದು, ಶಿಕ್ಷಕರಿಗೆ ಪಾಠಕ್ಕಿಂತ ‘ಪಠ್ಯೇತರ’ ಚಟುವಟಿಕೆಗಳು ಭಾರವಾಗಿವೆ.
‘ಕಳೆದ ಬಾರಿ 14ನೇ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನ ಪಡೆದಿದೆ. ಇದು ಅಲ್ಲಿನ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ ಹಾಗೂ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಸ್ತುಬದ್ಧ ಬೋಧನೆ, ಪ್ರತಿಫಲವಾಗಿದೆ. ಆದರೆ, ಇಲ್ಲಿನ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣ ವಿಷಯದಲ್ಲಿ ಸೂಕ್ತ ಮೇಲ್ವಿಚಾರಣೆ ಮಾಡಿಲ್ಲ’ ಎನ್ನುತ್ತಾರೆ ಹಿರಿಯ ವಕೀಲ ಸಾಲೋಮನ್ ಆಲಫ್ರೆಡ್.
‘ಬಹುತೇಕ ಖಾಸಗಿ ಶಾಲೆಗಳಲ್ಲೂ ತರಬೇತಿ ಮತ್ತು ಕೌಶಲದ ಹೊಂದಿದ ಅರ್ಹ ಶಿಕ್ಷಕರಿಲ್ಲ. ಇಂಥ ಖಾಸಗಿ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕೆಲಸ ಆಗಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಇದ್ದು, ಜಿಲ್ಲೆಯನ್ನು ಉನ್ನತ ಮಟ್ಟಕ್ಕೆ ತರುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ.
ಬೇರೆ ಕಾರ್ಯಗಳಲ್ಲಿ ಶಿಕ್ಷಕರು: ಫಲಿತಾಂಶ ಇಳಿಕೆಗೆ ಶಿಕ್ಷಕರನ್ನು ಬೇರೆ ಕಾರ್ಯಗಳಿಗೆ ತೊಡಗಿಸುವುದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
‘ಗ್ರಾಮೀಣ ಭಾಗದಲ್ಲಿ ಎಸ್‌ಡಿಎಂಸಿ ಮುಖ್ಯಶಿಕ್ಷಕರು ಬಿಸಿಯೂಟ ಮತ್ತು ಎಸ್‌ಡಿಎಂಸಿ ನಡುವೆ ಹೊಂದಾಣಿಕೆಯಿಲ್ಲದೇ ಮಕ್ಕಳ ಮೇಲೆ ಪರಿಣಾಮ ಬೀರಿ ಶಿಕ್ಷಣ ಮಟ್ಟ ಜಿಲ್ಲೆಯಲ್ಲಿ ಹದಗೆಡುತ್ತಿದೆ. ಕೆಲವು ಕಡೆ ಶಾಲೆಗೆ ಪಾನಮತ್ತರಾಗಿ ಬರುವ ಶಿಕ್ಷಕರು ಒಂದೆಡೆಯಾದರೆ, ಶಿಕ್ಷಕರೇ ಮುಖ್ಯಶಿಕ್ಷಕರನ್ನು ಹೆದರಿಸುವುದು ಮತ್ತೊಂದು ಕಡೆ ನಡೆದಿದೆ. ಹೀಗಾಗಿ ಫಲಿತಾಂಶದಲ್ಲಿ ಇದು ಇಳಿಕೆಗೆ ಕಾರಣವಾಗಿದೆ ಎಂದು ಪ್ರಗತಿಪರ ರೈತ ಅಶೋಕ ಮಲ್ಲಾಬಾದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.