ಕೆಂಭಾವಿ: ರೈತರಿಗೆ ಕಾಲುವೆಗಳ ಮೂಲಕ ಸಮರ್ಪಕ ನೀರು ಒದಗಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿದ್ದು ಅದರ ನಿರ್ವಹಣೆ ಕುರಿತು ವಿದೇಶಿ ತಂತ್ರಜ್ಞಾನದ ಅಳವಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಗುರುವಾರ ಫ್ರಾನ್ಸ್ ದೇಶದ ನೀರಾವರಿ ತಜ್ಞ ಡಿ.ರೆನಾಲ್ಟ್ ಅವರು ನಾರಾಯಣಪುರ ಎಡದಂಡೆ ಕಾಲುವೆಯ ಹಲವು ಉಪ ಕಾಲುವೆಗಳಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದರು.
ಈಗಾಗಲೇ ನೂತನ ಸ್ಕಾಡಾ ತಂತ್ರಜ್ಞಾನ ಮೂಲಕ ಉಪಕಾಲುವೆಗಳಿಗೆ ನೀರು ಹರಿಸಿ ರೈತರಿಗೆ ಸಮರ್ಪಕ ನೀರು ತರುವಲ್ಲಿ ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿದ್ದಾರೆ. ಈಗ ಸ್ಕಾಡಾ ತಂತ್ರಜ್ಞಾದ ಬಳಕೆ ಮತ್ತು ಅವುಗಳ ನಿರ್ವಹಣೆ, ಕಾಲುವೆಯ ಕೊನೆಯ ಭಾಗದ ರೈತರಿಗೂ ನೀರು ಹರಿಸುವುದು, ಸ್ಕಾಡಾರಹಿತ ಪ್ರದೇಶದಲ್ಲೂ ರೈತರಿಗೆ ನೀರು ಒದಗಿಸುವುದು ಸೇರಿದಂತೆ ಹಲವು ಕ್ರಮಗಳ ಕುರಿತು ರೇನಾಲ್ಟ್ ಅವರು ಖುದ್ದು ಉಪ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಆಲಮಟ್ಟಿಯಲ್ಲಿ ನೂತನ ತಂತ್ರಜಾನ ಮತ್ತು ನೀರಿನ ಬಳಕೆ ಕುರಿತು ಫ್ರಾನ್ಸ್ ದೇಶದ ನೀರಾವರಿ ನಿಪುಣರು ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದು ಮುಂಬರುವ ದಿನಗಳಲ್ಲಿ ಫ್ರಾನ್ಸ್ ದೇಶದ ತಂತ್ರಜ್ಞಾನ ಇಲ್ಲಿ ಅಳವಡಿಸುವ ಕುರಿತು ಚಿಂತನೆ ಹಾಗೂ ಹಿರಿಯ ಅಧಿಕಾರಿಗಳ ಮತ್ತು ಸರ್ಕಾರದ ಮಟ್ಟದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಧಿಕಾರಿಗಳಾದ ಸುನಿಲ ಕುಮಾರ, ಗುರುರಾಜ, ಜಿ.ಡಿ. ಸಜ್ಜನ ಸೇರಿದಂತೆ ಹಲವು ಅಧಿಕಾರಿಗಳು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.