ಕೆಂಭಾವಿ: ಅತಿವೃಷ್ಟಿಯಿಂದ ಬೆಳೆಹಾನಿಯಾದ ಪ್ರದೇಶಗಳಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಅಹವಾಲು ಆಲಿಸಿದರು.
ಪಟ್ಟಣ ಸಮೀಪದ ಆಲಾಳ ಗ್ರಾಮದ ಜಮೀನಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ತೊಗರಿಬೆಳೆ ಪರಿಶೀಲಿಸಿದರು, ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಲೆ ಹತ್ತಿ, ತೊಗರಿ ಸೇರಿದಂತೆ ತಗ್ಗು ಪ್ರದೇಶದಲ್ಲಿರುವ ಅನೇಕ ಬೆಳೆಗಳು ಹಾನಿಯಾದ ಕುರಿತು ಮಾಹಿತಿ ಪಡೆದರು.
ರೈತರ ಮನವಿ: ‘ಈಗಾಗಲೇ ಹೆಚ್ಚಿನ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿವೆ. ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದ್ದವೆ. ಇನ್ನು ಮಳೆ ನಿಂತಿಲ್ಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ತೊಗರಿ ಮತ್ತು ಹತ್ತಿ ಬೆಳೆ ಹಾನಿ ಸಂಭವಿಸಲಿದೆ. ಅದನ್ನು ಕೂಡ ಅಧಿಕಾರಿಗಳು ಪರಿಗಣಿಸಬೇಕು, ಇಲ್ಲದಿದ್ದರೆ ರೈತರು ಸಂಕಷ್ಟಕ್ಕೆ ತುತ್ತಾಗುತ್ತಾರೆ’ ಎಂದು ಮನವಿ ಮಾಡಿದರು.
ಸಚಿವರ ಭರವಸೆ: ರೈತರ ಮನವಿಗೆ ಸ್ಪಂದಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ಅಧಿಕಾರಿಗಳು ಕೊಟ್ಟ ಮಾಹಿತಿಯಂತೆ ಈವರೆಗೂ ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಧಿಕಾರಿಗಳಿಗೆ ಹಾನಿಯಾದ ಪ್ರತಿ ಎಕರೆಯ ಸಮೀಕ್ಷೆ ನಡೆಸಿ ಐದು ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ’ ಎಂದರು.
‘ಜುಲೈ ಮತ್ತು ಆಗಸ್ಟ್ ತಿಂಗಳು ಸೇರಿ ಈವೆಗೆ ಅತಿವೃಷ್ಟಿಯಿಂದಾಗಿ ವ್ಯಾಪಕ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅವರಿಗೆ ಸರ್ಕಾರ ಬದ್ಧವಾಗಿದೆ. ಇನ್ನೂ ಬೆಳೆ ವಿಮೆ ಪರಿಹಾರ ಬಗ್ಗೆ ರೈತರೊಬ್ಬರು ಗಮನಕ್ಕೆ ತಂದಿದ್ದು, ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು’ ಎಂದು ತಿಳಿಸಿದರು.
ತಹಶೀಲ್ದಾರ್ ಎಚ್.ಎ. ಸರಕಾವಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಶಿವಮಹಾಂತ ಚಂದಾಪುರ, ಬಸನಗೌಡ ಯಾಳಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ಬಸವರಾಜ ಚಿಂಚೋಳಿ, ತಾ.ಪಂ ಇಒ ಬಸವರಾಜ ಸಜ್ಜನ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಮನಗೌಡ, ಕಂದಾಯ ನೀರಿಕ್ಷಕ ರಾಜೆಸಾಬ, ವಾದಿರಾಜ ಕುಲಕರ್ಣಿ, ಭ್ರಮ್ಮದೇವ, ಕಾಶಿನಾಥ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.