
ಕೆಂಭಾವಿ: ‘ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಂತಹಂತವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಕೆಲವೇ ದಿನಗಳಲ್ಲಿ ಈ ಆಸ್ಪತ್ರೆಗೆ ಹಲವು ತಜ್ಞ ವೈದ್ಯರ ಸೇವೆ ಲಭ್ಯವಾಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಪಟ್ಟಣದಲ್ಲಿ ಬಹುದೊಡ್ಡ ಆಸ್ಪತ್ರೆ ನಿರ್ಮಾಣವಾಗಿದೆ. ಈ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದು ಸಾರ್ವಜನಿಕರ ಕರ್ತವ್ಯವಾಗಿದೆ’ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕಾಳಜಿ ಮತ್ತು ಸಹಕಾರದಿಂದ ಈ ಆಸ್ಪತ್ರೆ ಮೇಲ್ದರ್ಜೆಗೇರಿದ್ದು, ಶೀಘ್ರವೇ ಇಲ್ಲಿ 50 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಟ್ಟಡ ಕಾಮಗಾರಿ ನಡೆದಿದ್ದು, ಪೂರ್ಣಗೊಂಡ ಬಳಿಕ ಹೈಟೆಕ್ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ’ ಎಂದರು.
‘ಈ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಿದ್ದು, ಅದಕ್ಕೆ ಬೇಕಾದ ಎಲ್ಲ ಔಷಧಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ನಂತರ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರಿಶೀಲನೆ ನಡೆಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಡಾ.ಸಿದ್ದು ನ್ಯಾಮಗೊಂಡ, ಡಾ.ರಾಹಿಲ್, ಮಂಜುಳಾ, ಸುಷ್ಮಾ, ಮಾಳಪ್ಪ, ಬಸಯ್ಯ, ರಮೇಶ, ಹಸೀನಾ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.