ADVERTISEMENT

ಕೆಂಭಾವಿ ಪುರಸಭೆಯ ಸಾಮಾನ್ಯ ಸಭೆ: ಆಡಳಿತಕ್ಕೆ ಬಿಸಿ ಮುಟ್ಟಿಸಿದ ಮಹಿಳಾ ಸದಸ್ಯರು

ಶೌಚಾಲಯ, ನೀರು ಸರಬರಾಜಿನ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:46 IST
Last Updated 18 ಡಿಸೆಂಬರ್ 2025, 4:46 IST
ಕೆಂಭಾವಿ ಪಟ್ಟಣದ ಪುರಸಭೆಯಲ್ಲಿ ನೂತನ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಶಂಕರಗೌಡ, ಮಲ್ಲಿಕಾರ್ಜುನ ಇದ್ದರು
ಕೆಂಭಾವಿ ಪಟ್ಟಣದ ಪುರಸಭೆಯಲ್ಲಿ ನೂತನ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಶಂಕರಗೌಡ, ಮಲ್ಲಿಕಾರ್ಜುನ ಇದ್ದರು   

ಕೆಂಭಾವಿ: ಪಟ್ಟಣದ ಪುರಸಭೆಯಲ್ಲಿ ನೂತನ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು.

2025ರ ಆರು ತಿಂಗಳ ಆದಾಯ ಮತ್ತು ಖರ್ಚು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳ ವತಿಯಿಂದ ನಡೆದ ನಿರಂತರ ನೀರು ಪೂರೈಕೆ ಕಾಮಗಾರಿ ಹಾಗೂ  ಸಾರ್ವಜನಿಕ ಶೌಚಾಲಯ ನಿರ್ಮಾಣದ ಕುರಿತ ವಿಷಯ ಸೇರಿದಂತೆ ಹಲವು ವಿಷಯಗಳ ಮೇಲೆ ಕಾವೇರಿದ ಚರ್ಚೆಗಳು ನಡೆದವು.

ಸಭೆ ಪ್ರಾರಂಭವಾಗುತ್ತಿದ್ದಂತೆ  ಆಡಳಿತ ಪಕ್ಷದ ಸದಸ್ಯ ಚೆಳಿಗೆಪ್ಪ ಹಾಗೂ ನಾಮನಿರ್ದೇಶಿತ ಸದಸ್ಯ ಶಿವಶಂಕರ ಖಾನಾಪುರ, ‘8 ಮತ್ತು 14ನೇ ವಾರ್ಡ್‌ನಲ್ಲಿ ಶೌಚಾಲಯ ನಿರ್ಮಿಸುವ ಕುರಿತು ಹಲವು ಬಾರಿ ಪುರಸಭೆಯ ಗಮನಕ್ಕೆ ತರಲಾಗಿದೆ. ಈ ಕುರಿತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಕಾಮಗಾರಿಗೆ ಹಿಂದೇಟು ಹಾಕುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ‘ಜಾಗದ ಕೊರತೆ ಇದ್ದು ಶೀಘ್ರದಲ್ಲೆ ಸಮಸ್ಯೆ ಬಗೆಹರಿಸಿ ಶೌಚಾಲಯ ನಿರ್ಮಾಣ ಮಾಡಲಾಗುವುದು’ ಎಂದರು.

ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪತ್ರಕರ್ತರ ಭವನ,ಅಂಗನವಾಡಿ ಕೇಂದ್ರಗಳಿಗೆ ಪುರಸಭೆ ವ್ಯಾಪ್ತಿಯ ಸಿಎ ಸೈಟ್ ನೀಡಲು ಎಲ್ಲ ಸದಸ್ಯರು ಒಕ್ಕೊರಲಿನ ಒಪ್ಪಿಗೆ ಸೂಚಿಸಿದರು.

ಸದಸ್ಯ ರವಿ ಸೊನ್ನದ ಮಾತನಾಡಿ, ‘ಈಗಾಗಲೆ ಕೆಲವು ಕಡೆ ನಿರಂತರ ನೀರಿನ ಪ್ರಯೋಗಿಕ ಪರೀಕ್ಷೆ ಮುಗಿದು ಯಶಸ್ಸು ಕಂಡಿದೆ. ಆದರೆ ಹಲವು ವಾರ್ಡ್‌ಗಳಲ್ಲಿ ಇನ್ನೂ ನೀರು ಬಾರದೆ ಇರುವುದಕ್ಕೆ ಕಾರಣವೇನು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಮನಿರ್ದೇಶಿತ ಸದಸ್ಯ ಪರಶುರಾಮ ಬಳಬಟ್ಟಿ ಮಾತನಾಡಿ, ‘ಪುರಸಭೆ ಆಡಳಿತ ಸಂಪೂರ್ಣ ವಿಫಲವಾಗಿದ್ದು ಬಂದ ಅನುದಾನ ಸಂಪೂರ್ಣ ಪೋಲಾಗಿ ಅವ್ಯವಹಾರದ ಛಾಯೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಂದೇ ಎಲೆಕ್ಟ್ರಿಕಲ್ ಅಂಗಡಿಗೆ ಹಲವು ಬಾರಿ ಬಿಲ್ ಪಾವತಿಸಿರುವುದು, ಜೆಸಿಬಿ ಯಂತ್ರ ದುರಸ್ತಿಯಲ್ಲಿ ಗೋಲಮಾಲ್ ಸೇರಿದಂತೆ ಹಲವು ಹಗರಣಗಳು ಕಂಡು ಬರುತ್ತಿದೆ’ ಎಂದು ಆರೋಪಿಸಿದರು.

ಆಡಳಿತಕ್ಕೆ ಬಿಸಿ ಮುಟ್ಟಿಸಿದ ಮಹಿಳಾ ಸದಸ್ಯರು: ಹಲವು ಬಾರಿ ಸಭೆ ಜರುಗಿದರೂ ಚಕಾರ ಎತ್ತದ ಮಹಿಳಾ ಸದಸ್ಯರು ಈ ಬಾರಿ ಪುರಸಭೆಯ ಆಡಳಿತ ವೈಫಲ್ಯ ಕುರಿತು ಧ್ವನಿ ಎತ್ತಿ ಆಡಳಿತಕ್ಕೆ ಬಿಸಿ ಮುಟ್ಟಿಸಿದರು.

5ನೇ ವಾರ್ಡಿನ ರಮ್ಯಾ ರಾಘವೇಂದ್ರ ದೇಶಪಾಂಡೆ ಮಾತನಾಡಿ, ‘ಮುಖ್ಯ ರಸ್ತೆಗಳಲ್ಲಿ ಕಸ ತುಂಬಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಪುರಸಭೆಯಲ್ಲಿ ಎರಡು ಜೆಸಿಬಿ ಯಂತ್ರಗಳಿದ್ದರೂ ಅವುಗಳ ದುರಸ್ತಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಅವುಗಳು ಕಾರ್ಯನಿರ್ವಹಿಸದೆ ಪೊಲೀಸ್ ಠಾಣೆಯಲ್ಲಿ ನಿಂತಿರುವುದು ಯಾಕೆ’ ಎಂದು ಪ್ರಶ್ನಿಸಿದರು.

ಸದಸ್ಯರಾದ ಬೇಗಂಬಿ ಹಾಗೂ ಸಂಗಮ್ಮ ಯರಗಲ್ ಒಳಚರಂಡಿ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ ಇಲ್ಲಿಯವರೆಗೂ ಕಾಮಗಾರಿ ನೆರವೇರಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸುಧಾಕರ ಡಿಗ್ಗಾವಿ, ಆರೀಫ್ ಖಾಜಿ, ಪರಶುರಾಮ ಬಳಬಟ್ಟಿ, ದೇವೇಂದ್ರಪ್ಪ ಟಣಕೆದಾರ ಮಾತನಾಡಿದರು.

ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ನಗರ ನೀರು ಸರಬರಾಜು ಮಂಡಳಿಯ ಎಇಇ ಶಂಕರಗೌಡ, ಪರಿಸರ ಅಭಿಯಂತರ ಜ್ಯೋತಿಶ್ರೀ, ಜೆಇ ಮಲ್ಲಿಕಾರ್ಜುನ, ಸುರೇಂದ್ರ ಸೇರಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಿದ್ದರು. ಸಿದ್ರಾಮಯ್ಯ ಇಂಡಿ ಸ್ವಾಗತಿಸಿದರು, ಭೀಮಣ್ಣ ವಂದಿಸಿದರು.

ಪುರಸಭೆ ಅನುದಾನ ಸಮರ್ಪಕವಾಗಿ ಜನತೆಯ ಅಭಿವೃದ್ಧಿಗೆ ಉಪಯೋಗವಾಗಬೇಕೆಂಬುದೆ ನನ್ನ ಉದ್ದೇಶ. ಈ ಕುರಿತು ಶೀಘ್ರದಲ್ಲೆ ಪುರಸಭೆಯ ಎಲ್ಲ ಅಧಿಕಾರಿ ಸಿಬ್ಬಂದಿ ಸಭೆ ಕರೆದು ಮೂಲ ಸೌಕರ್ಯ ಮತ್ತು ಸ್ವಚ್ಚತೆ ಕಾಪಾಡುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ
–ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ. ಪುರಸಭೆ ಅಧ್ಯಕ್ಷೆ
ಪಟ್ಟಣದಲ್ಲಿ ಆಯುಷ್ ಆಸ್ಪತ್ರೆ ಮಂಜೂರಾಗಿದ್ದು ಆಸ್ಪತ್ರೆ ನಿರ್ಮಾಣಕ್ಕೆ ಸಿಎ ಸೈಟ್ ಸ್ಥಳ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ
–ರವಿ ಸೊನ್ನದ, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.