
ಕೆಂಭಾವಿ: ‘ಪಟ್ಟಣದ ಸಮೀಪ ಏವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮತ್ತು ಸಹ ಶಿಕ್ಷಕರನ್ನು ವರ್ಗಾವಣೆ ಮಾಡುತ್ತಿರುವದನ್ನು ರದ್ದುಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಆಗ್ರಹಿಸಿದೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ‘ಏವೂರು ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ 40 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕನ ಅವಶ್ಯವಿರುತ್ತದೆ. ಆದರೆ 400 ವಿದ್ಯಾರ್ಥಿಗಳಿಗೆ ಕೇವಲ 5 ಜನ ಕಾಯಂ ಶಿಕ್ಷಕರು ಪರಿಣಾಮಕಾರಿಯಾಗಿ ಭೋಧನೆ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿಇರುವ ಐವರಲ್ಲಿ ಮುಖ್ಯಶಿಕ್ಷಕ ಸೇರಿ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
‘ಈಗಾಗಲೇ ಯಾದಗಿರಿ ಜಿಲ್ಲೆ ಶೈಕ್ಷಣಕವಾಗಿ ರಾಜ್ಯದಲ್ಲಿ ಹಿಂದುಳಿದಿರುತ್ತದೆ ಮತ್ತುಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿರುತ್ತದೆ. ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಮುಖ್ಯ ಪರೀಕ್ಷೆಗಳು ಸಹ ಬರುತ್ತಿದೆ. ಮಕ್ಕಳ ಕಲಿಕೆಯ ದೃಷ್ಟಿಯಿಂದ ಸದರಿ ಶಿಕ್ಷಕರನ್ನು ಇದೇ ಶಾಲೆಯಲ್ಲಿ ಮುಂದುವರೆಯಲು ಅನುಕೂಲ ಮಾಡಿಕೊಡಬೇಕು’ ಆಗ್ರಹಿಸಿದ್ದಾರೆ.
‘ಒಂದು ವೇಳೆ ವರ್ಗಾವಣೆ ಮಾಡಿದ್ದೆಆದರೆ ಶಹಾಪೂರ-ಸಿಂದಗಿರಾಜ್ಯ ಹೆದ್ದಾರಿ ಬಂದ್ ಮಾಡಿ ಶಾಲಾ ಮಕ್ಕಳೊಂದಿಗೆ ಕೂಡಿಕೊಂಡು ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ದೇವಿಂದ್ರಪ್ಪ ದೊರೆ ಹಾಗೂ ಶಾಂತಯ್ಯ ಗುತ್ತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.