
ಯಾದಗಿರಿ: ಕೋಲಿ, ಕಬ್ಬಲಿಗ, ಅಂಬಿಗ ಸೇರಿದಂತೆ ಇತರೆ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಅಖಿಲ ಭಾರತೀಯ ಕೋಲಿ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದ್ದಾರೆ.
ಕೋಲಿ ಸಮಾಜದ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ, ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಕೋರಿದೆ.
‘ಟೋಕರೆ ಕೋಲಿ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬಾರಕಿ, ಬೆಸ್ತ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು. ರಾಜ್ಯದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಆದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮುಖಂಡರು ಮನವಿ ಮಾಡಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವುದಾಗಿ ರಾಜ್ಯಪಾಲರು ಭರವಸೆ ನೀಡಿದರು.
ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಕಶ್ಯಪ್, ಕೇಂದ್ರದ ಮಾಜಿ ಸಚಿವ ಬಾನು ಪ್ರತಾಪ್ ಸಿಂಗ್ ವರ್ಮಾ, ಮಾಜಿ ಸಂಸದ ಸತ್ಯನಾರಾಯಣ ಪವಾರ್, ಮಹಿಳಾ ಅಧ್ಯಕ್ಷೆ ದ್ರೌಪತಿ ಕೋಲಿ, ರಾಜ್ಯ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ, ಪ್ರಮುಖರಾದ ಇಂದ್ರಾಶಕ್ತಿ, ಮಡಿವಾಳಪ್ಪ, ಟಿ.ಡಿ.ರಾಜ್, ಉಮೇಶ ಕೆ. ಮುದ್ನಾಳ, ನರಸಿಂಗ್ ಕೋಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.