
ವಡಗೇರಾ: ‘ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಬಡವರನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರ ಮಾಡಿದೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ಖಾಸಗಿಯವರ ತೆಕ್ಕೆಗೆ ಹಾಕಲು ಹೊರಟಿದೆ’ ಎಂದು ಎಐಡಿಎಸ್ಒ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್. ಹೇಳಿದರು.
ತಾಲ್ಲೂಕಿನ ನಾಯ್ಕಲ್ ತಾಂಡಾ(ಭವಾನಿ ನಗರ)ದಲ್ಲಿ ಕೆಪಿಎಸ್-ಮ್ಯಾಗ್ನೆಟ್ ಶಾಲೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನಗೊಳಿಸುವ ಶಿಕ್ಷಣ ಇಲಾಖೆಯ ನಿರ್ಧಾರ ಖಂಡಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪೋಷಕರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.
‘ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳೋಣ. ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಸರ್ಕಾರಿ ಶಾಲೆಗಳು ನಮ್ಮ ಹಕ್ಕು’ ಎಂದು ಎಚ್ಚರಿಕೆ ನೀಡಿದರು.
ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ನಾಯ್ಕಲ್ ಗ್ರಾಮದ ಸುತ್ತಲಿನ ಹಲವು ಗ್ರಾಮಗಳ ಶಾಲೆಗಳನ್ನು ವಿಲೀನ ಮಾಡಲು ನಿರ್ಧರಿಸಲಾಗಿದೆ. ತಾಂಡಾದ ಸರ್ಕಾರಿ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.
ಎಐಡಿಎಸ್ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಮಾತನಾಡಿ, ‘ಸರ್ಕಾರಿ ಶಾಲೆಗಳನ್ನು ಮುಚ್ಚಿ ಮ್ಯಾಗ್ನೆಟ್ ಶಾಲೆಗಳನ್ನು ಅಸ್ತಿತ್ವಕ್ಕೆ ತಂದರೆ ಮುಂದೆ ಬಡ ಮಕ್ಕಳಿಗೆ ಮಕ್ಕಳಿಗೆ ಶಿಕ್ಷಣವೆಂಬುದು ಗಗನ ಕುಸಮವಾಗುತ್ತದೆ. ವಿಲೀನ ಯೋಜನೆ ಜಾರಿಗೊಳಿಸಿ, ಸರ್ಕಾರಿ ಶಾಲೆ ಮುಚ್ಚಿದರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಂಡಾದ ಕುಮಾರ, ಡಾಲಿ, ಅಶೋಕ, ಅಜಯ, ಕಿರಣ ಸೇರಿದಂತೆ ಹಲವು ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.