ADVERTISEMENT

ಬೆಸ್ಕಾಂ ಸಹಾಯಕ ಈಗ ಉಪ ವಿಭಾಗಾಧಿಕಾರಿ

ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ರ್‍ಯಾಂಕ್‌

ಅಶೋಕ ಸಾಲವಾಡಗಿ
Published 26 ಡಿಸೆಂಬರ್ 2019, 13:00 IST
Last Updated 26 ಡಿಸೆಂಬರ್ 2019, 13:00 IST
ವಿರೇಶ ಶೆಟ್ಟಿ
ವಿರೇಶ ಶೆಟ್ಟಿ   

ಸುರಪುರ: ತಾಲ್ಲೂಕಿನ ಪೇಠಅಮ್ಮಾಪುರ ಗ್ರಾಮದ ವಿರೇಶ ಅಮರಣ್ಣ ಶೆಟ್ಟಿ ಕೆಎಎಸ್ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೇಠಮ್ಮಾಪುರದ ಸಗರನಾಡು ಸಂಸ್ಥೆಯಲ್ಲಿ ಓದಿದ್ದಾರೆ. ತಾಯಿ ಮೃತಪಟ್ಟ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊಡಲಿಲ್ಲ. ಮರು ವರ್ಷ ಕೊಪ್ಪಳದ ಕುಣಿಕೇರಿ ಕೂಡಲಸಂಗಮನಾಥ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯನ್ನು ಶೇ 78 ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

ಹುನಗುಂದದಲ್ಲಿ ಶೇ. 76 ಅಂಕ ಪಡೆದು ಡಿಪ್ಲೋಮಾ ಪಾಸಾಗಿದ್ದಾರೆ. ಕಲಬುರ್ಗಿಯ ಪಿಡಿಎ ಕಾಲೇಜಿನಲ್ಲಿ ಎಂಜಿನಿಯರಿಂಗ್‌ನಲ್ಲಿ ಶೇ 71 ಅಂಕ ಪಡೆದಿದ್ದಾರೆ.

ADVERTISEMENT

2013ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ಸಫಲರಾಗಲಿಲ್ಲ. 2014ರಲ್ಲಿ ಕೆಎಎಸ್ ಪರೀಕ್ಷೆ ಕೈಹಿಡಿಯಲಿಲ್ಲ. 2016ರಲ್ಲಿ ಬೆಸ್ಕಾಂನಲ್ಲಿ ಸಹಾಯಕ ಹುದ್ದೆಗೆ ನೇಮಕವಾಗುತ್ತಾರೆ. ಎಂಜಿನಿಯರಿಂಗ್ ಓದಿ ಸಹಾಯಕ ಹುದ್ದೆಗೆ ಮನಸ್ಸು ಒಪ್ಪಲಿಲ್ಲವಾದರೂ ತಂದೆಯ ಒತ್ತಾಸೆ ಮೇರೆಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರುತ್ತಾರೆ. ನಿರಂತರ ಪರಿಶ್ರಮದಿಂದ ಮೇ 2017ರಲ್ಲಿ ಎರಡನೇ ಬಾರಿ ಕೆಎಎಸ್ ಬರೆದು 1146 ಅಂಕಗಳೊಂದಿಗೆ ಉಪ ವಿಭಾಗಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

ನಿತ್ಯ 8 ರಿಂದ 10 ತಾಸು ಅಭ್ಯಾಸ ಮಾಡಿದ್ದೇನೆ. ನನಗೆ ರಜೆ ಮತ್ತು ಮಾರ್ಗದರ್ಶನ ನೀಡಿ ಸಹಕರಿಸಿದ ಬೆಸ್ಕಾಂ ನಿರ್ದೇಶಕ ಅಶೋಕಕುಮಾರ ಅವರ ನೆರವನ್ನು ಮರೆಯಲಾರೆ’ ಎನ್ನುತ್ತಾರೆ ವಿರೇಶ.

‘ನನ್ನ ಈ ಸಾಧನೆಯಲ್ಲಿ ತಂದೆ ಅಮರಣ್ಣ, ಅಣ್ಣ ಶರಣಬಸವ, ಅಕ್ಕ ಈರಮ್ಮ, ಭಾವ ಬಸವಣ್ಣೆಪ್ಪ ಹಂಗರಗಿ ಅವರ ಬೆಂಬಲ ಬಹಳಷ್ಟು ಇದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆನ್ನುವ ಹಂಬಲ’ ವಿರೇಶ ಅವರದ್ದು.

‘ಪ್ರಜಾವಾಣಿ’ ಮೆಚ್ಚಿನ ಪತ್ರಿಕೆ: ‘ನಾನು ಕೆಎಎಸ್ ಪರೀಕ್ಷೆ ಪಾಸು ಮಾಡಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಬಹಳ ಮಟ್ಟಿಗೆ ಕಾರಣ. ಪ್ರತಿನಿತ್ಯ ಎರಡೂ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದೆ. ಸಂಪಾದಕೀಯ, ಪ್ರಚಲಿತ ಸುದ್ದಿಗಳು, ರಾಷ್ಟ್ರೀಯ, ಅಂತರರಾಷ್ಟ್ರೀಯ ಕರಾರುವಾಕ್ ಸುದ್ದಿಗಳು ನಾನು ಉತ್ತಮ ಅಂಕ ಪಡೆಯಲು ನೆರವಾದವು’ ಎಂದು ಧನ್ಯತಾಭಾವದಿಂದ ಹೇಳಿದರು ವಿರೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.