ಹುಣಸಗಿ: ತಾಲ್ಲೂಕಿನ ಗಡಿಭಾಗದಲ್ಲಿರುವ ಕೃಷ್ಣಾ ನದಿ ತೀರದಲ್ಲಿರುವ ಮೇಲಿನಗಡ್ಡಿ, ಜಂಗಿನ ಗಡ್ಡಿ ಸ್ಥಳಕ್ಕೆ ಯಾದಗಿರಿ ಪಶುಪಾಲನ ಉಪನಿರ್ದೇಶಕ ರಾಜು ದೇಶಮುಖ ಹಾಗೂ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಒಟ್ಟು 187 ಕುರಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದು ಕೆಲವು ಅಲ್ಲಲ್ಲಿ ಕೃಷ್ಣಾ ನದಿ ತೀರದ ಕಲ್ಲುಬಂಡೆಗಳ ಮಧ್ಯೆ ಮೃತ ಕುರಿಗಳ ಕಳೆಬರ ಪತ್ತೆಯಾಗಿದ್ದರೆ ಬಹುತೇಕ ನದಿಯಲ್ಲಿ ಕೊಚ್ಚಿಹೋಗಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಗದ್ದೆಪ್ಪ ಜಂಜಿನ ಗಡ್ಡಿ ಅವರ 35 ಕುರಿಗಳು ಸಾವನ್ನಪ್ಪಿದ್ದು 5 ಕುರಿಗಳನ್ನು ಶುಕ್ರವಾರ ರಕ್ಷಿಸಲಾಗಿದೆ. ಇನ್ನು ಮೇಲಿನ ಗಡ್ಡಿಯ ನಾಗಪ್ಪ ಗುರಿಕಾರ್ ಅವರ 35 ಕುರಿಗಳು ಕೊಚ್ಚಿ ಹೋಗಿದ್ದು 5 ಗುರಿಗಳನ್ನು ರಕ್ಷಿಸಲಾಗಿದೆ. ಚಂದಪ್ಪ ಮಾಲಿಪಾಟೀಲ್ ಅವರ 18 ಕುರಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದ್ದು 35 ಕುರಿಗಳು ಮೃತಪಟ್ಟಿವೆ. ಶಾವಮ್ಮ ಸುಲ್ತಾನ್‌ಪುರ ಅವರ ಎಲ್ಲಾ 35 ಕುರಿಗಳು, ಶಿವಯ್ಯ ಸ್ವಾಮಿ ಅವರ 10 ಹಾಗೂ ಮಾಳಪ್ಪ ಜಗಲಿ ಅವರ 32 ಕುರಿಗಳು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿವೆ ಎಂದು ಮಾಹಿತಿ ಲಭ್ಯವಾಗಿದೆ.
ತಾಲ್ಲೂಕಿನ ಈ ಮೂರು ಗ್ರಾಮಗಳ 6 ಜನ ಸುಮಾರು 15 ದಿನಗಳ ಹಿಂದೆ ಕೃಷ್ಣಾ ನದಿಯ ನಡುಗಡ್ದೆ ಕ್ವಾಟಿ ಮಾಳಿ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಹೋಗಿದ್ದರು. ಆದರೆ ನದಿಗೆ ಅಪಾರ ಪ್ರಮಾಣದ ನೀರು ಹರಿಸುವ ಕುರಿತು ಮಾಹಿತಿ ಲಭ್ಯವಾಗಿದ್ದರಿಂದಾಗಿ ಕುರಿಗಳನ್ನು ಅಲ್ಲೇ ಬಿಟ್ಟು ತಮ್ಮ ಗ್ರಾಮಗಳಿಗೆ ಆಗಮಿಸಿದ್ದರು.
ಆ ಬಳಿಕ ಕೃಷ್ಣಾ ನದಿಗೆ ಸುಮಾರು 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಸಿದ್ದರಿಂದಾಗಿ ಕುರಿಗಾಹಿಗಳು ಆ ಪ್ರದೇಶಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಆದರೆ ಕುರಿಗಳು ನದಿಯಲ್ಲಿ ಕೊಚ್ಚಿ ಹೋಗಿರುವ ಕುರಿತು ತಿಳಿದು ಬಂದಿದ್ದರಿಂದ ಗುರುವಾರ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರು. ಶುಕ್ರವಾರ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದುದ್ದರಿಂದಾಗಿ ಹರಿಗೋಲಿನ ಸಹಾಯದೊಂದಿಗೆ ತೆರಳಿ ಬದುಕಿದ್ದ ಕುರಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾಗಿ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಹುಣಸಗಿ ಸಹಾಯಕ ನಿರ್ದೇಶಕ ಮೆಹಬೂಬ್ ಸಾಬ್ ಖಾಜಿ, ಸುರೇಶ ಹಚ್ಚಡ್, ಭಾಗ್ಯಶ್ರೀ, ಉಪತಹಶೀಲ್ದಾರ್ ಕಲ್ಲಪ್ಪ ಜಂಜನಗಡ್ಡಿ, ಕಂದಾಯ ನಿರೀಕ್ಷಕ ಶಾಂತಗೌಡ, ಗ್ರಾಮ ಆಡಳಿತ ಅಧಿಕಾರಿ ಶಿವಶಂಕರ್, ಗ್ರಾಮದ ಶಿವಪ್ಪ ಬಿರಾದಾರ ಸೇರಿದಂತೆ ಕುರಿಗಾಹಿಗಳು ಗ್ರಾಮದ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.