ಯಾದಗಿರಿ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳಹರಿವು ಅಧಿಕವಾಗಿದ್ದು, ಮಂಗಳವಾರ ತಡರಾತ್ರಿಯಿಂದ 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.
ಮಂಗಳವಾರ ಬೆಳಿಗ್ಗೆ 9ರ ಸುಮಾರಿಗೆ 1.60 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಒಳಹರಿವಿನ ಪ್ರಮಾಣ ಹೆಚ್ಚಾದ ಬಳಿಕ ಬೆಳಿಗ್ಗೆ 11.30ರಿಂದ 1,80,000 ಕ್ಯೂಸೆಕ್‌ಗೆ ಏರಿಕೆ ಮಾಡಲಾಗಿತ್ತು. ಸಂಜೆ 6ಕ್ಕೆ 2.04 ಲಕ್ಷ ಕ್ಯೂಸೆಕ್ ಏರಿಸಿದ್ದು, ತಡರಾತ್ರಿ ವೇಳೆಗೆ ಅದು 2.20 ಲಕ್ಷ ಕ್ಯೂಸೆಕ್‌ಗೆ ತಲುಪಿದೆ. ಬುಧವಾರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಇತಿಹಾಸ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನದ ಮೆಟ್ಟಿಲುಗಳು ಮುಳುಗಡೆಯಾಗಿವೆ. ಕಂದಾಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಶಹಾಪುರ ತಾಲ್ಲೂಕಿನ ಕೊಳ್ಳುರ ಗ್ರಾಮದ ಹತ್ತಿರದ ಸೇತುವೆಗೆ ಹೊಂದಿಕೊಂಡು ಕೃಷ್ಣಾ ನದಿ ನೀರು ಹರಿಯುತ್ತಿದೆ. ನೀರಿನ ಮಟ್ಟ ಏರಿಕೆಯಾದರೆ ಸೇತುವೆ ಮುಳುಗಡೆಯಾಗಲಿದೆ. ದೇವದುರ್ಗ- ಶಹಾಪುರ ನಡುವಿನ ಸಂಪರ್ಕ ಕಡಿತವಾಗಲಿದೆ ಎಂದು ಸ್ಥಳೀಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.