ADVERTISEMENT

ಕುಕ್ಕುಟ ಸಂಜೀವಿನಿ; 28 ಗ್ರಾಮಗಳು ಆಯ್ಕೆ

ನರೇಗಾ ಯೋಜನೆಯಡಿ ಕೋಳಿ ಸಾಕಾಣಿಕೆ ಶೆಡ್‌ಗಳ ನಿರ್ಮಾಣ

ಮಲ್ಲಿಕಾರ್ಜುನ ನಾಲವಾರ
Published 6 ನವೆಂಬರ್ 2025, 7:20 IST
Last Updated 6 ನವೆಂಬರ್ 2025, 7:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಯಾದಗಿರಿ: ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಉತ್ತೇಜನ ನೀಡಿ, ಅವರನ್ನು ಸಬಲರನ್ನಾಗಿ ಮಾಡಲು ನರೇಗಾದಡಿ ಸಮುದಾಯ ಕೋಳಿ ಸಾಕಾಣಿಕೆ ಶೆಡ್‌ಗಳ ನಿರ್ಮಾಣಕ್ಕೆ 28 ಗ್ರಾಮಗಳನ್ನು ಗುರುತಿಸಲಾಗಿದೆ.

ಜಿಲ್ಲಾ ಪಂಚಾಯಿತಿಯು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್‌ಆರ್‌ಎಲ್‌ಎಂ) ಕುಕ್ಕುಟ ಸಂಜೀವಿನ ಯೋಜನೆಯಡಿ 30 ಕೋಳಿ ಸಾಕಾಣಿಕೆ ಕೇಂದ್ರಗಳ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದೆ. ಅವುಗಳ ಪೈಕಿ 28 ಕೇಂದ್ರಗಳಿಗೆ ಜಾಗ ಗುರುತಿಸಿದೆ. ಸರ್ಕಾರದಿಂದ ಅನುಮೋದನೆ ಸಿಗುತ್ತಿದ್ದಂತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.

ಕುಕ್ಕುಟೋದ್ಯಮದ ಮೂಲಕ ಆರ್ಥಿಕ ನೆರವು ಪಡೆಯಲು ಬಯಸುವ ಐದರಿಂದ ಹತ್ತು ಜನ ಸದಸ್ಯರು ಇರುವ ಮಹಿಳಾ ಸ್ವಸಹಾಯ ಸಂಘಗಳು ಮುಂದೆ ಬಂದು ಇದರ ಲಾಭವನ್ನು ಪಡೆಯಬಹುದಾಗಿದೆ. ನರೇಗಾದಡಿ ಶೆಡ್‌ಗಳನ್ನು ನಿರ್ಮಾಣ ಮಾಡಿ, ಪಶುಪಾಲನಾ ಇಲಾಖೆಯ ಅಗತ್ಯವಾದ ತಾಂತ್ರಿಕ ನೆರವು ಸಹ ಕೊಡಲಿದೆ.

ADVERTISEMENT

ರಾಜ್ಯ ಸರ್ಕಾರವು ಈ ಯೋಜನೆಗೆ ಕುಕ್ಕುಟ ಸಂಜೀವಿನಿ ಎಂದು ಹೆಸರಿಟ್ಟಿದೆ. ಗ್ರಾಮೀಣ ಭಾಗದ ಜನವಸತಿ ಪ್ರದೇಶದಿಂದ 1ರಿಂದ 2 ಕಿ.ಮೀ. ಅಂತರದಲ್ಲಿ ಕೋಳಿ ಸಾಕಾಣಿಕೆಯ ಶೆಡ್‌ ನಿರ್ಮಾಣ ಮಾಡಲಾಗುವುದು. ಗುರುತಿಸಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ರಿಂದ 10 ಸದಸ್ಯರು ಇರುವ ಮಹಿಳಾ ಸಂಘಗಳು ಮುಂದೆ ಬಂದು ಕೋಳಿ ಸಾಕಾಣಿಕೆಯ ಜವಾಬ್ದಾರಿಯನ್ನು ಹೊತ್ತಿಕೊಳ್ಳಬಹುದು.

‘ಮೊಟ್ಟೆಗಳನ್ನು ಇರಿಸುವ 500 ಮತ್ತು 1,000 ಕೋಳಿಗಳಿಗೆ ಅನುಗುಣವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಲಾಗುವುದು. 500 ಕೋಳಿಗಳ ಶೆಡ್‌ಗೆ ಸುಮಾರು ₹ 4.50 ಲಕ್ಷ ಹಾಗೂ 1,000 ಕೋಳಿಗಳ ಶೆಡ್‌ಗೆ ಸುಮಾರು ₹ 7.50 ಲಕ್ಷ ಅಥವಾ ₹ 10 ಲಕ್ಷ ವೆಚ್ಚ ಆಗಬಹುದು. ನರೇಗಾದಡಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡಲಾಗುವುದು’ ಎನ್ನುತ್ತಾರೆ ಹಣಕಾಸು ವಿಭಾಗದ ಜಿಲ್ಲಾ ವ್ಯವಸ್ಥಾಪಕ ಸಿದ್ದರಾಮಪ್ಪ.  

‘ಪಶುಪಾಲನಾ ಇಲಾಖೆಯು ಕೋಳಿ ಮರಿಗಳನ್ನು ನೀಡಿ, ಆಯ್ಕೆಯಾದ ಫಲಾನುಭವಿಗಳಿಗೆ 10 ದಿನಗಳು ತರಬೇತಿಯನ್ನು ಕೊಡಲಿದೆ. ಕೋಳಿಗಳ ಆರೈಕೆ, ಆಹಾರ ನೀಡುವ ವಿಧಾನದ ಬಗ್ಗೆ ತಿಳಿಸಿಕೊಡಲಿದೆ. ಇದರ ಜೊತೆಗೆ ತಾಂತ್ರಿಕ ಸಲಹೆಯೂ ಕೊಡಲಿದೆ. ಇಲ್ಲಿ ಉತ್ಪತ್ತಿಯಾಗುವ ಮೊಟ್ಟೆಗಳನ್ನು ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುವುದು. ಆಸಕ್ತ ಮಹಿಳೆಯರು ಮುಂದೆ ಬಂದು ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಸುರಪುರದ 7 ಗ್ರಾಮಗಳು ಆಯ್ಕೆ: ಜಿಲ್ಲೆಯ 28 ಗ್ರಾಮಗಳ ಪೈಕಿ ಸುರಪುರ ತಾಲ್ಲೂಕಿನ 7 ಗ್ರಾಮಗಳನ್ನು ಕುಕ್ಕಟ ಸಂಜೀವನಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹುಣಸಗಿ ಮತ್ತು ವಡಗೇರಾ ತಾಲ್ಲೂಕಿನ ತಲಾ 6 ಗ್ರಾಮಗಳು, ಶಹಾಪುರ ತಾಲ್ಲೂಕಿನ 4, ಯಾದಗಿರಿ ತಾಲ್ಲೂಕಿನ 3 ಹಾಗೂ ಗುರುಮಠಕಲ್ ತಾಲ್ಲೂಕಿನ 2 ಗ್ರಾಮಗಳು ಆಯ್ಕೆಯಾಗಿವೆ. 

ಲವೀಶ್‌ ಒರಡಿಯಾ
ಕುಕ್ಕುಟ ಸಂಜೀವಿನ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಅರ್ಹರಿಗೆ ತರಬೇತಿ ಕೊಟ್ಟು ಉದ್ದಮಿಶೀಲರನ್ನಾಗಿ ಮಾಡಲಾಗುವುದು
ಲವೀಶ್ ಒರಡಿಯಾ ಜಿಲ್ಲಾ ಪಂಚಾಯಿತಿ ಸಿಇಒ    

ಆಯ್ಕೆಯಾದ ಗ್ರಾಮಗಳು

ಗುರುಮಠಕಲ್‌ನ ಕೊಂಕಲ್ ಮತ್ತು ನಸಲವಾಯಿ ಯಾದಗಿರಿಯ ಅರಕೇರಾ (ಬಿ) ಸೈದಾಪುರ ಹಾಗೂ ಕಿಲ್ಲನಕೇರಾ ಶಹಾಪುರದ ಕನ್ಯಕೋಳುರು ಸಗರ್ ಇಬ್ರಾಹಿಂಪುರ ಮತ್ತು ಖಾನಾಪುರ ಹುಣಸಗಿಯ ಹೆಬ್ಬಾಳ (ಬಿ) ಮಾರನಾಳ ತೀರ್ಥ ಯಡಹಳ್ಳಿ ಕೊಡೆಕಲ್ ಮತ್ತು ಜೋಗದಬಾವಿ ಆಯ್ಕೆಯಾಗಿವೆ.‌ ವಡಗೇರಾ ತಾಲ್ಲೂಕಿನ ಗುಂಡಗುರ್ತಿ ತಡಿಬಿಡಿ ಬೆಂಡಬೆಂಬಳಿ ಬಿಳ್ಹಾರ್ ಕುರಕುಂದ ಮತ್ತು ಇಟ್ಗಾ ಸುರಪುರ ತಾಲ್ಲೂಕಿನ ಹೆಗ್ಗಣದೊಡ್ಡಿ ಮಂಗಳೂರ ಬಡ್ಯಾಪುರ ನಗ್ನೂರ ಗುಂಡಿಹಳ್ಳಿ ಮಾಲಗತ್ತಿ ಮತ್ತು ವಾಗಣಗೇರಾ ಗ್ರಾಮಗಳು ಕುಕ್ಕುಟ ಸಂಜೀವಿನಿ ಯೋಜನೆಯ ವ್ಯಾಪ್ತಿಯಲ್ಲಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.