ಸುರಪುರ: ಅದು 1975 ರಿಂದ 1995ರ ಕಾಲ. ತಾಲ್ಲೂಕಿನ ಪಿಡ್ಡಪ್ಪ ಪೂಜಾರಿ ಎಂಬುವವರು ಕುಸ್ತಿ ಪಂದ್ಯಾವಳಿಯಲ್ಲಿ ಅನಿಭಿಷಿಕ್ತ ಸಾಮ್ರಾಟನಾಗಿ ಮೆರೆದರು.
ಆ ಸಮಯದಲ್ಲಿ ಪಿಡ್ಡಪ್ಪ ಭಾಗವಹಿಸುತ್ತಿದ್ದ ಕುಸ್ತಿ ನೋಡಲು ಜನ ದೂರದ ಊರುಗಳಿಂದ ಬರುತ್ತಿದ್ದರು.
ಪಿಡ್ಡಪ್ಪ ತಾಲ್ಲೂಕಿನ ಐತಿಹಾಸಿಕ ಊರು ವಾಗನಗೇರಿದವರು. ಚಿಕ್ಕಂದಿನಲ್ಲಿ ಊರಿನ ಪೈಲ್ವಾನರಾಗಿದ್ದ ದೊಡ್ಡಬಿಕ್ಕಣ್ಣಗೌಡ, ಕಪ್ಪಣ್ಣ ದೇಸಾಯಿ ಅವರ ಕುಸ್ತಿಯಿಂದ ಪ್ರಭಾವಿತರಾಗಿದ್ದರು. ಪಿಡ್ಡಪ್ಪ ಅವರ ಆಸಕ್ತಿ ಗಮನಿಸಿ ಊರಿನ ಪೈಲ್ವಾನರು ಖ್ಯಾತ ಕುಸ್ತಿ ಉಸ್ತಾದರಾಗಿದ್ದ ಅಫಜಲಪುರದ ಕರ್ಜಿಗಿಯ ರಾಜು ಅವರ ಹತ್ತಿರ ಸೇರಿಸಿದರು.
ಗುರುವಿನಿಂದ ಕುಸ್ತಿಯ ಎಲ್ಲ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡ ಪಿಡ್ಡಪ್ಪ ತನ್ನ 16ನೇ ವಯಸ್ಸಿನಲ್ಲಿ ಕುಸ್ತಿ ಕಣಕ್ಕೆ ಧುಮುಕಿದರು. ಅಲ್ಲಿಂದ ಪಿಡ್ಡಪ್ಪ ಅವರದ್ದೇ ಸಾಮ್ರಾಜ್ಯ. ಅವರು ಹಾಕುತ್ತಿದ್ದ ಟಾಂಗ್, ಸವಾರಿ, ರುಮ್ಮಿ, ಪೆಂಟಿ, ಕೌಡಿ ಬಗಲಹೊಡೆತ ಇತರ ಪೇಚುಗಳು ಖ್ಯಾತಿ ಪಡೆದುಕೊಂಡವು.
ಪಿಡ್ಡಪ್ಪ ಅವರ ಅಸಾಧಾರಣ ಕುಸ್ತಿ ವ್ಯಾಮೋಹ ಕಂಡು ತಾಯಿ ಚೆನ್ನಾಗಿ ಬೆಳೆಸಿದರು. ಕುಸ್ತಿ ದೇಹದಾರ್ಢ್ಯಕ್ಕೆ ಬೇಕಾಗುವ ಆಹಾರ ತಿನ್ನಿಸಿದರು. ತಂದೆ ಕಿಷ್ಟಪ್ಪ ಮಗನಿಗೆ ಎಲ್ಲ ಪ್ರೋತ್ಸಾಹ ನೀಡಿದರು. ಗ್ರಾಮದ ಚಂದಪ್ಪ ಸಾಹುಕಾರ, ಗೋವಿಂದಪ್ಪಗೌಡ, ರಾಮಣ್ಣ ಪೂಜಾರಿ ಸಹಾಯ ಹಸ್ತ ನೀಡಿದರು.
ಅಸಾಧಾರಣ ಕುಸ್ತಿ ಕೌಶಲಗಳನ್ನು ಪಿಡ್ಡಪ್ಪ ಮೈಗೂಡಿಸಿಕೊಂಡಿದ್ದರು. ದಪ್ಪಗಿರುವ ಪೈಲ್ವಾನರನ್ನು ಹೇಗೆ ಮಣ್ಣುಮುಕ್ಕಿಸಬೇಕು. ಎತ್ತರವಾಗಿರುವ ಕುಸ್ತಿ ಪಟುಗಳನ್ನು ಹೇಗೆ ನೆಲಕ್ಕೆ ಕೆಡವಬೇಕು. ಕೆಳಗಡೆ ಬಿದ್ದಾಗ ಹೇಗೆ ಮೇಲೆ ಬರಬೇಕು. ಕೆಳಗೆ ಇದ್ದಾಗ ಮೇಲೆ ಇದ್ದ ಪೈಲ್ವಾನರನ್ನು ಯಾವ ಪೇಚು ಹಾಕಿ ಚಿತ್ ಮಾಡಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದರು.
ಬೆಳಗಿನ ಜಾವ ಊರಿನ ಕೆರೆಯಾಚೆ ಇರುವ ಐತಿಹಾಸಿಕ ಕಾನಬಾವಿ ಹತ್ತಿರ ತರಬೇತಿ ನಡೆಯುತ್ತಿತ್ತು. ಸೊಟ್ಟಪ್ಪ ಪುಜಾರಿ, ಯಂಕಪ್ಪಗೌಡ, ಮುದುಕಪ್ಪಗೌಡ, ಶರಣಪ್ಪ ಮಲ್ಲಿಬಾವಿ, ಮಾನಪ್ಪ ಪುಜಾರಿ ಇತರ ಪೈಲ್ವಾನರು ಸಾಥ್ ಕೊಡುತ್ತಿದ್ದರು.
ಎರಡು ದಶಕಗಳ ಕಾಲ ಹಲವು ಜಿಲ್ಲೆಗಳಲ್ಲಿ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಪರಾಕ್ರಮ ಮೆರೆದರು. ಬೆಳ್ಳಿ ಕಡಗ, ನಗದು ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದರು. ಪಿಡ್ಡಪ್ಪನ ಜೊತೆ ಸೆಣಸಲು ಹೆಸರಾಂತ ಪೈಲ್ವಾನರು ಹದರುತ್ತಿದ್ದರು. ಬೆಳಗಾವಿ, ಜತ್, ಸಾಂಗ್ಲಿ, ಸೋಲಾಪುರ, ಅಕ್ಕಲಕೋಟ, ವಿಜಯಪುರ ಇತರೆಡೆ ಪೈಲ್ವಾನರು ಪಿಡ್ಡಪ್ಪನ ಕುಸ್ತಿಗೆ ಮಾರುಹೋಗಿದ್ದರು.
ಆ ಕಾಲದ ಬಲಾಢ್ಯ ಪೈಲ್ವಾನರಾಗಿದ್ದ ಕೌತಾಳೆ ದೋರನಹಳ್ಳಿ, ಜೈಭೇರಿ, ಕೊತಬಾಳದ ಬನ್ನೆಪ್ಪ, ಡೋಣೂರಿನ ಹೊನ್ನಪ್ಪ, ವನದುರ್ಗದ ಚನ್ನಪ್ಪ, ಶೇಖಪ್ಪ, ಯಂಕಪ್ಪ, ಮಲ್ಲಿಬಾವಿಯ ಶರಣಪ್ಪ, ದೇವರಗೋನಾಲದ ಭೀಮಪ್ಪ, ಹೊನ್ನಪ್ಪ, ಮುಡಬೂಳಿನ ಚೌಧರಿ, ನಿಂಗಪ್ಪ, ಗೋಗಿಯ ಮಲ್ಲಪ್ಪ, ಸಗರದ ಭೀಮಪ್ಪ, ಬಿದರಾಣಿಯ ಮಲ್ಲಪ್ಪ, ಹಣಮಪ್ಪ ಹೀಗೆ ಹತ್ತು ಹಲವು ಖ್ಯಾತ ಪೈಲ್ವಾನರನ್ನು ಚಿತ್ ಮಾಡಿ ಖ್ಯಾತಿ ಗಳಿಸಿದ್ದರು.
ವನದುರ್ಗ, ಹಳಿಸಗರ, ಹೊಸಸಗರ, ದೋರನಹಳ್ಳಿ, ಕೆಂಭಾವಿ, ರಸ್ತಾಪುರ, ಇಜೇರಿ, ಜೇವರ್ಗಿ, ದೇವರಗೋನಾಲ, ದೇವಿಕೇರಿ, ಮಲ್ಲಿಬಾವಿ, ಕಂಪ್ಲಿ, ತಾಂಬಾ, ಭಾಗೇವಾಡಿ, ಇತರ ನೂರಾರು ಊರುಗಳಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯಗಳಲ್ಲಿ ಪಿಡ್ಡಪ್ಪ ಅವರದ್ದೇ ಕಾರುಬಾರು.
62ರ ಹರೆಯದ ಪಿಡ್ಡಪ್ಪ 1996ರಲ್ಲಿ ತನ್ನ ಕೊನೆಯ ಕುಸ್ತಿ ಪಂದ್ಯ ಆಡಿ ನಿವೃತ್ತಿ ಪಡೆದರು. ವಾಗನಗೇರಿಯ ವೇಣುಗೋಪಾಲಸ್ವಾಮಿ ದೇಗುಲದ ಅರ್ಚಕರಾದ ಅವರು ಸಂಸಾರ ನಿರ್ವಹಣೆಗೆ ಬಡಿಗತನ ಮಾಡುತ್ತಿದ್ದಾರೆ. ಪಿಡ್ಡಪ್ಪ ಅವರಿಗೆ ತಾಲ್ಲೂಕಿನ ಜನ ಈಗಲೂ ‘ಪೈಲ್ವಾನ್ ಪಿಡ್ಡಪ್ಪ’ ಎಂದೇ ಕರೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.