ADVERTISEMENT

ಲಂಖಿಪುರ-ಖೇರಿ ಪ್ರಕರಣ: ಕೃಷ್ಣಾ ನದಿಯಲ್ಲಿ ಹುತಾತ್ಮ ರೈತರ ಚಿತಾಭಸ್ಮ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 16:47 IST
Last Updated 31 ಅಕ್ಟೋಬರ್ 2021, 16:47 IST
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಭಾನುವಾರ ಕೃಷ್ಣಾ ನದಿಯಲ್ಲಿ ಹುತಾತ್ಮ ರೈತರ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು. ಮಾಜಿ ಶಾಸಕ ಬಿ.ಆರ್.ಪಾಟೀಲ್, ಭಾಸ್ಕರರಾವ ಮುಡಬೂಳ, ಶರಣಪ್ಪ ಸಲಾದಪುರ, ಮಲ್ಲಣ್ಣ ಪರಿವಾಣ ಗೋಗಿ, ಶೌಕತ್ ಅಲಿ ಆಲೂರ, ಹಣಮಂತ ವಾಲ್ಮೀಕಿ, ಹಣಮಂತ ಭಂಗಿ, ಹಣಮಂತ ಬೆಣಕಲ್ ಇದ್ದರು
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಭಾನುವಾರ ಕೃಷ್ಣಾ ನದಿಯಲ್ಲಿ ಹುತಾತ್ಮ ರೈತರ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು. ಮಾಜಿ ಶಾಸಕ ಬಿ.ಆರ್.ಪಾಟೀಲ್, ಭಾಸ್ಕರರಾವ ಮುಡಬೂಳ, ಶರಣಪ್ಪ ಸಲಾದಪುರ, ಮಲ್ಲಣ್ಣ ಪರಿವಾಣ ಗೋಗಿ, ಶೌಕತ್ ಅಲಿ ಆಲೂರ, ಹಣಮಂತ ವಾಲ್ಮೀಕಿ, ಹಣಮಂತ ಭಂಗಿ, ಹಣಮಂತ ಬೆಣಕಲ್ ಇದ್ದರು   

ಶಹಾಪುರ: ಉತ್ತರ ಪ್ರದೇಶದ ಲಂಖಿಪುರ-ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಾರು ಹತ್ತಿಸಿ ನಾಲ್ಕು ಜನ ರೈತರನ್ನು ಕೊಲೆ ಮಾಡಲಾದ ರೈತರ ಚಿತಾಭಸ್ಮವನ್ನು ಭಾನುವಾರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಮಾಜಿ ಶಾಸಕ ಬಿ.ಆರ್.ಪಾಟೀಲ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಹಾಗೂ ಹೋರಾಟಗಾರರ ಜೊತೆಗೂಡಿ ಆಗಮಿಸಿದ ಅವರು ರೈತರು ದೆಹಲಿಯಿಂದ ಕಳುಹಿಸಿದ ಭಸ್ಮವನ್ನು ನದಿಯ ದಂಡೆಯ ಬಳಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ನಂತದ ಭಸ್ಮವನ್ನು ನದಿಯಲ್ಲಿ ಹರಿಬಿಟ್ಟರು.

ನಂತರ ಮಾತನಾಡಿದ ಅವರು, ಕಾವೇರಿ ನದಿಯಲ್ಲಿ ಚಿತಾಭಸ್ಮವನ್ನು ಒಂದೆಡೆ ಹರಿಬಿಟ್ಟಿದ್ದೇವೆ. ಇನ್ನೊಂದು ಕೃಷ್ಣಾ ನದಿಯಲ್ಲಿ ಹರಿಬಿಡುವ ಮೂಲಕ ರೈತರ ತ್ಯಾಗ ಹಾಗೂ ಬಲಿದಾನವನ್ನು ದೇಶವು ಯಾವತ್ತೂ ಮರೆಯುವುದಿಲ್ಲ ಎಂಬ ಆಶಾಭಾವನೆ ನಮ್ಮದು. ಹುತಾತ್ಮರಾದ ರೈತರು ನಮ್ಮ ನೀರು, ಗಾಳಿ, ಬೆಳಕಿನ ಜೊತೆ ಇದ್ದಾರೆ ಎಂದರು.

ADVERTISEMENT

‘ಕೇಂದ್ರ ಸಚಿವರ ಮಗ ಇದರಲ್ಲಿ ಭಾಗಿಯಾಗುವುದರ ಮೂಲಕ ಸರ್ಕಾರವೇ ರೈತರನ್ನು ಕೊಲೆ ಮಾಡಿದೆ ಎಂಬ ಆರೋಪವಿದೆ. ಶಾಂತಿ, ಅಹಿಂಸೆ ತತ್ವವನ್ನು ನಂಬಿ ಪಾಲನೆ ಮಾಡುತ್ತಿರುವ ರೈತರ ಪ್ರತಿಭಟನೆ ಹಕ್ಕು ಮೊಟಕುಗೊಳಿಸುವ ಯತ್ನ ನಿರಂತರವಾಗಿ ಸಾಗಿದೆ. ಸರ್ಕಾರದ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ಭಾಸ್ಕರರಾವ ಮುಡಬೂಳ ಹಾಗೂ ಶರಣಪ್ಪ ಸಲಾದಪುರ ಮಾತನಾಡಿ, ಕೃಷಿ ರೈತರ ಬದುಕಿನ ಜೀವಾಳವಾಗಿದೆ. ದೆಹಲಿಯಲ್ಲಿ ರೈತರು ಒಗ್ಗೂಡಿ ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ನೈತಿಕವಾಗಿ ಬೆಂಬಲ ನೀಡುತ್ತಾ ಬಂದಿದ್ದೇವೆ. ಡಾ.ಸ್ವಾಮಿನಾಥನ್ ವರದಿ ಜಾರಿಗೆ ಸಾಕಷ್ಟು ಒತ್ತಡ ಹಾಕುತ್ತಿದ್ದರೂ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ಇದು ಸ್ವಾರ್ಥ ದುರುದ್ದೇಶದ ಗುರಿಯೊಂದೇ ಆಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಭೀಮಸೇನರಾವ ಕುಲಕರ್ಣಿ, ಶಿವರಡ್ಡಿ ಕೊಳ್ಳೂರ, ಉಮಾಪತಿ ಪಾಟೀಲ, ಜಂಬಯ್ಯ ದೊರೆ,ಭೀಮಣ್ಣಗೌಡ ಹುಲಕಲ್, ಉಮೇಶ ಮುಡಬೂಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.