ಯಾದಗಿರಿ: ಸುರಪುರ ನಗರದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತ ಒತ್ತುವರಿ ಆಗಿರುವ ಜಾಗವನ್ನು ಸರ್ವೆ ಮಾಡಿ ಗುರುತಿಸಿ, ಅದನ್ನು ಡಾ.ಅಂಬೇಡ್ಕರ್ ಗ್ರಂಥಾಲಯಕ್ಕೆ ಮಂಜೂರು ಮಾಡಿಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಒಬ್ಬರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಸರ್ವೆ ನಂ 7/1ರಲ್ಲಿ ಸರ್ಕಾರಿ ಖಾರೀಜ್ ಖಾತಾ ಭೂಮಿಗೆ ಹೊಂದಿಕೊಂಡ ಅಂಬೇಡ್ಕರ್ ವೃತ್ತದ ಸುತ್ತಲಿನ 2 ಎಕರೆ 26 ಗುಂಟೆ ಭೂಮಿ ಒತ್ತುವರಿ ಆಗಿದೆ. ಅದನ್ನು ತೆರವುಗೊಳಿಸಿ, ಆ ಭೂಮಿಯನ್ನು ದಲಿತ ಸಮುದಾಯಕ್ಕೆ ನೀಡಿದರೆ ಅದರಲ್ಲಿ ಅಂಬೇಡ್ಕರ್ ಅವರ ಹೆಸರಲ್ಲಿ ಗ್ರಂಥಾಲಯ, ಉದ್ಯಾನ ಹಾಗೂ ಸಾಂಸ್ಕೃತಿಕ ಭವನ ನಿರ್ಮಿಸಲಾಗುವುದು ಎಂದರು.
ಅಂಬೇಡ್ಕರ್ ವೃತ್ತದ ಸುತ್ತಲಿನ ಸರ್ವೆ ನಂಬರ್ 7/1ರಲ್ಲಿ ಸರ್ಕಾರಿ ಖಾರೀಜ್ ಖಾತಾ ಭೂಮಿ 6 ಎಕರೆ 15 ಗುಂಟೆ ಇದೆ. ಇದರಲ್ಲಿ 3 ಎಕರೆ 29 ಗುಂಟೆ ಶಿಕ್ಷಣ ಸಂಸ್ಥೆಯೊಂದರ ಹೆಸರಿಗೆ ಮಂಜೂರಾಗಿದೆ. ಉಳಿದ 2 ಎಕರೆ 26 ಗುಂಟೆ ಹೆಚ್ಚುವರಿ ಭೂಮಿಯನ್ನು ಸಂಸ್ಥೆಯ ಕಾಣದ ಕೈಗಳ ತಂತ್ರವನ್ನು ಬಳಸಿಕೊಂಡು ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಕಬಳಿಸಿಕೊಂಡು, ಕಂಪೌಂಡ್ ಗೋಡೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
1983-84ರಿಂದ ದಲಿತ ಸಮಾಜದ ಸಂಘಟನೆಗಳ ಮುಖಂಡರು, ಸ್ಥಳೀಯ ನಿವಾಸಿಗಳು ಡಾ. ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ನಾಮಫಲಕ ವೃತ್ತವನ್ನು ಸರ್ಕಾರದ ನಿಯಮದಂತೆ ಅಳವಡಿಸಿದ್ದಾರೆ. 2012ರಲ್ಲಿ ಪುತ್ಥಳಿಯನ್ನು ನಿರ್ಮಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಹೋಗುತ್ತಿದ್ದೇವೆ. ಹೀಗಾಗಿ, ಖಾರೀಜ್ ಖಾತಾ ಭೂಮಿಯನ್ನು ಅಂಬೇಡ್ಕರ್ ಹೆಸರಿಗೆ ಮಂಜೂರು ಮಾಡಿ ಕೊಡಬೇಕು ಎಂದು ಕೋರಿದ್ದಾರೆ.
ಈ ವೇಳೆ ಸಮಿತಿಯ ಪದಾಧಿಕಾರಿಗಳಾದ ನಾಗಣ್ಣ ಬಡಿಗೇರ, ರಾಮಣ್ಣ ಕಲ್ಲದೇವನಹಳ್ಳಿ, ಮಾಳಪ್ಪ ಕಿರದಳ್ಳಿ, ಅಶೋಕ್ ನಾಯ್ಕಲ್, ಮರಳಸಿದ್ದಪ್ಪ, ಪರಶುರಾಮ್ ಮಹಲ್ ರೋಜಾ, ಭೀಮರಾಯ ಬಳಿಚಕ್ರ, ಮರಿಲಿಂಗಪ್ಪ ಬದ್ದೆಪಲ್ಲಿ, ಲಿಂಗಣ್ಣ ಬೀರನಾಳ, ಭೀಮರಾಯ ಅಗ್ನಿ, ಶರಣಪ್ಪ ತಳವಾರಗೇರಾ, ಚಂದ್ರ ಬಜಾರೆ ಸೇರಿ ಹಲವಾರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.