ADVERTISEMENT

ಎಲೆಯ ಮೇಲೆ ಅರಳಿದ ಚಿತ್ರಗಳು!

ಕಲಾವಿದ ಮಲ್ಲಿಕಾರ್ಜುನ ಕಮತಗಿ ಅನನ್ಯ ಕೌಶಲ

ಪ್ರಜಾವಾಣಿ ವಿಶೇಷ
Published 1 ಅಕ್ಟೋಬರ್ 2023, 6:38 IST
Last Updated 1 ಅಕ್ಟೋಬರ್ 2023, 6:38 IST
ಮಲ್ಲಿಕಾರ್ಜುನ ಕಮತಗಿ ಅವರ ಕೌಶಲದಲ್ಲಿ ಎಲೆಯ ಮೇಲೆ ಅರಳಿದ ಚಿತ್ರಗಳು
ಮಲ್ಲಿಕಾರ್ಜುನ ಕಮತಗಿ ಅವರ ಕೌಶಲದಲ್ಲಿ ಎಲೆಯ ಮೇಲೆ ಅರಳಿದ ಚಿತ್ರಗಳು    

ಸುರಪುರ: ನಗರದ ಚಿತ್ರಕಲಾವಿದ ಮಲ್ಲಿಕಾರ್ಜುನ ಕಮತಗಿ ಅಪರೂಪದ ಕಲೆಯಾದ ಅರಳಿ ಮರದ ಎಲೆಗಳ ಮೇಲೆ ಚಿತ್ರ ಬಿಡಿಸುವ ಕೌಶಲವನ್ನು ಕರಗತ ಮಾಡಿಕೊಂಡಿದ್ದಾರೆ.

‘ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಾನು ಬಿಡಿಸಿದ ಚಿತ್ರಕಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿತ್ತು. ಅದು ಚಿತ್ರಕಲೆಯಲ್ಲಿ ಸಾಧಿಸುವ ವಿಶಿಷ್ಟ ಛಲ ಮೂಡಿಸಿತು’ ಎನ್ನುತ್ತಾರೆ ಅವರು.

ವಿಶಿಷ್ಟ ಕಲೆ ಕಲಿಯಬೇಕು ಎಂದುಕೊಂಡಾಗ ಅರಳಿ ಮರದ ಎಲೆಯ ಮೇಲೆ ಚಿತ್ರ ಬಿಡಿಸುವ (ಲೀಫ್ ಆರ್ಟ್) ಕಲೆ ಗಮನ ಸೆಳೆಯಿತು. ’ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಿಳಿದುಕೊಂಡು ಕಲೆ ರೂಢಿಸಿಕೊಳ್ಳಲು ಪ್ರಯತ್ನಿಸಿದೆ, ಛಲ ಬಿಡದೆ ಸತತ ಪ್ರಯತ್ನಿಸಿ ಈಗ ಯಶಸ್ವಿ ಲೀಫ್ ಆರ್ಟ್ ಕಲಾವಿದನಾಗಿದ್ದೇನೆ’ ಎನ್ನುತ್ತಾರೆ.

ADVERTISEMENT

ಅವರ ಕಲೆಯಲ್ಲಿ ಈಗಾಗಲೇ ನೂರಾರು ಕಲಾಕೃತಿಗಳು ಮೂಡಿ ಬಂದಿವೆ. ಅವುಗಳಲ್ಲಿ ಗಣೇಶ, ಅಬ್ದುಲ ಕಲಾಂ, ಯೇಸು, ಬುದ್ಧ, ಮಹಾವೀರ, ಗುರುನಾನಕ, ಅಂಬೇಡ್ಕರ್, ವಾಲ್ಮೀಕಿ, ಬಸವಣ್ಣ, ಚೌಡಯ್ಯ, ಕುವೆಂಪು, ಕಾರಂತ, ಸೇವಾಲಾಲ, ಸಂಗೊಳ್ಳಿ ರಾಯಣ್ಣ, ರಾಜಕುಮಾರ, ನಾಲ್ವಡಿ ರಾಜಾ ವೆಂಕಟಪ್ಪನಾಯಕ ಹೀಗೆ ಹಲವಾರು ಚಿತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಈಗ ಸಿಂಧನೂರಿನಲ್ಲಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ದತ್ತಾಂಶ ನಮೂದು ಸಹಾಯಕರಾಗಿ ಸೇವೆಯಲ್ಲಿದ್ದಾರೆ. ಈಚೆಗೆ ಸಿಂಧನೂರಿನಲ್ಲಿ ಅವರು ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನವನ್ನು ಸಾವಿರಾರು ಜನರು, ಗಣ್ಯರು, ಕಲಾವಿದರು ವೀಕ್ಷಿಸಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಆಯ್ದ 50 ಕ್ಕೂ ಹೆಚ್ಚು ಕಲಾಕೃತಿಗಳು ವೀಕ್ಷಕರ ಮನಗೆದ್ದವು.

ಈಗ ಎಲ್ಲೆಡೆಯಿಂದ ಚಿತ್ರಕಲಾ ಪ್ರದರ್ಶನಕ್ಕೆ ಆಹ್ವಾನ ಬರುತ್ತಿವೆ. ಶಿಷ್ಯರಾಗಿ ಈ ವಿಶಿಷ್ಟ ಕಲೆಯನ್ನು ಕಲಿಯಲು ಬರುತ್ತೇವೆ ಎಂದು ಕೇಳುವವರ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ಕಮತಗಿ
ದೇವೇಂದ್ರ ಹೂಡಾ
ಅರಳಿ ಮರದ ಎಲೆಗಳ ಮೇಲೆ ಭಾರತದ ಚರಿತ್ರೆಯನ್ನು ಚಿತ್ರಿಸಿ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸುವ ಸಿದ್ಧತೆ ಮಾಡಿಕೊಂಡಿದ್ದೇನೆ
ಮಲ್ಲಿಕಾರ್ಜುನ ಕಮತಗಿ ಕಲಾವಿದ
ಲೀಫ್ ಆರ್ಟ್ ಕಲಾವಿದರು ರಾಜ್ಯದಲ್ಲಿ ವಿರಳಾತಿ ವಿರಳ. ಕಮತಗಿ ಅವರು ಈ ಕಲೆಯಲ್ಲಿ ಸಿದ್ಧಹಸ್ತರು. ಈ ಕಲೆಗೆ ಪ್ರೋತ್ಸಾಹದ ಅಗತ್ಯವಿದೆ
ದೇವೇಂದ್ರ ಹೂಡಾ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯ

ಏನೀದು ಲೀಫ್ ಆರ್ಟ್ ಈ ಕಲೆಯ ಮೂಲ ಚೀನಾ. ಹುವಾಂಗ್ ತೈಶೆಂಗ್ ಇದರ ಜನಕ. ಅವರ ಕಲೆಯನ್ನು ಗಿನ್ನಿಸ್ ಬುಕ್‍ನಲ್ಲಿ ಸೇರಿಸಲಾಗಿದೆ. ಚೀನಾದಲ್ಲಿ ಈ ಕಲೆಯನ್ನು ಚಿನಾರ್ ಮರದ ಎಲೆಗಳ ಮೇಲೆ ಮಾಡಲಾಗುತ್ತದೆ. ಕ್ರಮೇಣ ಈ ಕಲೆ ಭಾರತಕ್ಕೆ ಬಂತು. ಇಲ್ಲಿ ಅರಳಿ ಎಲೆಯ ಮೇಲೆ ಚಿತ್ರ ಬಿಡಿಸುವ ಪರಿಪಾಠ ನಡೆದಿದೆ. ಇದು ನವಿರು ಮತ್ತು ಸೂಕ್ಷ್ಮ ಕಲೆ. ಕಲಾವಿದನಿಗೆ ಜಾಣ್ಮೆ ಏಕಾಗ್ರತೆ ಮುಖ್ಯ. ಎಲೆಯ ಮೇಲೆ ಪೆನ್ಸಿಲ್‍ನಿಂದ ಬಿಡಿಸಿದ ಚಿತ್ರದ ರೇಖೆಗಳನ್ನು ಸೂಕ್ಷ್ಮವಾದ ಬ್ಲೇಡ್‍ನಿಂದ ಕತ್ತರಿಸಿ ತೆಗೆಯಲಾಗುತ್ತದೆ. ಎಲೆ ತನ್ನ ಜೀವಸತ್ವ ಕಳೆದುಕೊಳ್ಳುವ ಮುಂಚೆ ಈ ಕ್ರಿಯೆ ಮುಗಿಯಬೇಕು. ಚಿತ್ರ ನೋಡಲು ಮೋಹಕವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.