ಸುರಪುರ: ತಾಲ್ಲೂಕಿನ ಕೋನ್ಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕೊರತೆ ಎದುರಿಸುತ್ತಿತ್ತು.
2016ರಲ್ಲಿ ಸಹ ಶಿಕ್ಷಕರಾಗಿ ಈ ಶಾಲೆಯಲ್ಲಿ ಸೇವೆಗೆ ಸೇರಿದ ದೇವದುರ್ಗ ತಾಲ್ಲೂಕಿನ ದಂಡಬಳಿ ಗ್ರಾಮದ ಬಸಮ್ಮ ಅಯ್ಯನಗೌಡ ಪಾಟೀಲ ಅವರಿಗೆ ಮಕ್ಕಳ ದಾಖಲಾತಿ ಜೊತೆಗೆ ಹಾಜರಾತಿ ಹೆಚ್ಚಿಸಬೇಕೆನ್ನುವ ಹಂಬಲ. ಇದಕ್ಕೆ ಅವರು ಆರಿಸಿಕೊಂಡಿದ್ದು ‘ಆಟದೊಂದಿಗೆ ಕಲಿಕೆ’ ಎಂಬ ವಿಧಾನ.
ಮಕ್ಕಳು ಆಟದಲ್ಲಿ ಅಭಿರುಚಿ ಹೊಂದಿದ್ದಾರೆ ಎಂದು ಕಂಡುಕೊಂಡ ಅವರು ವೈವಿಧ್ಯಮಯ ಕಲಿಕೋಪಕರಣಗಳನ್ನು ಸ್ವಂತ ಹಣದಲ್ಲಿ ತಯಾರಿಸಿದರು. ಜೊತೆಗೆ ಚಕಾರ, ಹುಲಿಮನಿ ಇತರ ಜನಪ್ರಿಯ ಗ್ರಾಮೀಣ ಕ್ರೀಡೆಗಳ ಮೂಲಕ ಬೋಧನೆ ಆರಂಭಿಸಿದರು.
ತಾವು ನಿತ್ಯ ಆಡುವ ಆಟದ ಮೂಲಕ ಬೋಧಿಸುತ್ತಿದ್ದರಿಂದ ಕ್ರಮೇಣ ಮಕ್ಕಳು ಆಕರ್ಷಿತರಾಗಿ ನಿತ್ಯವೂ ಶಾಲೆಗೆ ಬರತೊಡಗಿದರು. ಪಾಠದಲ್ಲೂ ಪ್ರಗತಿ ಸಾಧಿಸಿ ಉತ್ತಮ ಅಂಕ ಪಡೆಯತೊಡಗಿದರು. ಕ್ರಮೇಣ ಮಕ್ಕಳ ಹಾಜರಾತಿ ಹೆಚ್ಚಾಗತೊಡಗಿತ್ತು.
2016ರಲ್ಲಿ 100ರೊಳಗೆ ಇದ್ದ ದಾಖಲಾತಿ ಈಗ 150ಕ್ಕೂ ಹೆಚ್ಚಾಗಿದೆ. ಹಾಜರಾತಿ ಶೇ 95ರಷ್ಟು ಇರುವುದು ಬಸಮ್ಮ ಅವರ ಪ್ರಯತ್ನದ ಫಲ. ಬಸಮ್ಮ ಈಗ ಪ್ರಭಾರ ಮುಖ್ಯ ಶಿಕ್ಷಕಿ.
ಪಠ್ಯದ ಜೊತೆಗೆ ಟೇಲರಿಂಗ್, ಕಸೂತಿ, ಕ್ರಾಫ್ಟ್ ಇತರ ಕರಕುಶಲ ಕಲೆಗಳನ್ನು ಕಲಿಸುತ್ತಾರೆ. ಪ್ರತಿಭಾ ಕಾರಂಜಿ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಾರೆ. ಪರಿಣಾಮ ಈಗ ಇವರ ಶಿಷ್ಯಂದಿರು ವಿಶೇಷವಾಗಿ ಬಾಲಕಿಯರು ಕಾಲೇಜು ಮೆಟ್ಟಿಲನ್ನು ಏರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.